ಕೃತಕ ಅಂಗಗಳು    

 
ಸ್ವಾಭಾವಿಕವಾದ ಅಂಗಗಳ ಬದಲಾಗಿ ನೆಲೆಗೊಳಿಸುವ ದೇಹಭಾಗಗಳು (ಆರ್ಟಿಫಿಶಿಯಲ್ ಆರ್ಗನ್ಸ್).

ಇತಿಹಾಸ : ಋಗ್ವೇದದ ಒಂದು ಮಂತ್ರದಲ್ಲಿ ಸೂಕ್ತ 116, ಅಧ್ಯಾಯ 8, ವರ್ಗ 10, ಮಂತ್ರ 15) ಇರುವ ನಿರೂಪಣೆ ಹೀಗಿದೆ-`ಖೇಲನೆಂಬ ಅರಸನ ಹೆಂಡತಿಯಾದ ವಿಶ್ವಲೆಯ ಒಂದು ಕಾಲು ಯುದ್ಧದಲ್ಲಿ ಹಕ್ಕಿಯ ರೆಕ್ಕೆಯಂತೆ ತುಂಡರಿಸಲ್ಪಟ್ಟಿತ್ತು; ನೀವು (ಅಶ್ವಿನೀ ಕುಮಾರರು) ಅದೇ ರಾತ್ರಿಯಲ್ಲಿ ಯುದ್ಧಭೂಮಿಗೆ ಹೋಗಿ ಶತ್ರುನ್ಯಸ್ತವಾದ ಧನವನ್ನು ಗಳಿಸುವುದಕ್ಕಾಗಿ ವಿಶ್ವಲೆಗೆ ಲೋಹಮಯ ತೊಡೆಯನ್ನು ಕೊಟ್ಟಿದ್ದಿರಿ' ಎನ್ನುವ ಉಲ್ಲೇಖವಿದೆ. ಅಂದ ಮಾತ್ರಕ್ಕೆ ಕೃತಕ ಅಂಗಗಳ ಬಳಕೆ ಭಾರತದಲ್ಲಿ ಸಾಮಾನ್ಯವಾಗಿತ್ತೆಂದು ಭಾವಿಸಲಾಗದು. ಇಂಗ್ಲಿಷ್ ಭಾಷೆಯಲ್ಲಿ ಕೃತಕ ಅಂಗದ ಜೋಡಣೆಗೆ ಬಳಸುತ್ತಿರುವ ಪ್ರಾಸ್ಥೆಸಿಸ್ ಎಂಬ ಶಬ್ದ ಗ್ರೀಕ್ ಮೂಲವಾದದ್ದು. ಸ್ಪಾರ್ಟಾದೇಶದ ಚರಿತ್ರೆಯಲ್ಲಿ(ಕ್ರಿ.ಪೂ. 5ನೆಯ ಶತಮಾನ) ಉಕ್ತವಾಗಿರುವ ಒಂದು ವರದಿಯ ಪ್ರಕಾರ ಹೆಜಿಸ್ಟ್ರೇಟಸ್ ಎಂಬ ಬಂದಿ ತನ್ನ ಪಾದವನ್ನು ಕತ್ತರಿಸಿಕೊಂಡು ಓಡಿಹೋಗಿದ್ದನೆಂದೂ ಅವನನ್ನು ಪುನಃ ಕೈದು ಮಾಡಿದಾಗ ಅವನು ಕೃತಕಪಾದಧಾರಿಯಾಗಿದ್ದನೆಂದೂ ಇದೆ. ಆದ್ದರಿಂದ ಗ್ರೀಸ್ ದೇಶದಲ್ಲಿ ಅಷ್ಟು ಪ್ರಾಚೀನಕಾಲದಲ್ಲಿಯೇ ಕೃತಕ ಅಂಗಗಳ ವಿಚಾರ ತಿಳಿದಿತ್ತೆಂದು ತರ್ಕಿಸಬಹುದು. ಇಂಗ್ಲೆಂಡಿನ ರಾಯಲ್ ಕಾಲೇಜ್ ಆಫ್ ಸರ್ಜನ್ನಿನ ವಸ್ತುಸಂಗ್ರಹಾಲಯದಲ್ಲಿ ಕ್ರಿ.ಪೂ ಸು.300ರ ವೇಳೆಯದು ಎನ್ನಲಾದ ಒಂದು ಕೃತಕಕಾಲನ್ನು ಪ್ರದರ್ಶಿಸಿದ್ದಾರೆ. ಕ್ರಿ.ಶ.ಸು.1509ರಲ್ಲಿ ಮಾಡಿ ಉಪಯೋಗಿಸುತ್ತಿದ್ದರೆನ್ನಲಾದ ಒಂದು ಕೃತಕ ಕೈ ನ್ಯೂರೆಂಬರ್ಗಿನ ವಸ್ತುಸಂಗ್ರಹಾಲಯದಲ್ಲಿದೆ. 19ನೆಯ ಶತಮಾನದ ಕಡೆಯ ಭಾಗದಲ್ಲಿ ಸಂವೇದನಾರಹಿತ ಹಾಗೂ ವಿಷಾಣುರಹಿತ ಶಸ್ತ್ರಕ್ರಿಯೆ ಆರಂಭವಾದ ಮೇಲೆ ಕೃತಕ ಅಂಗಗಳ ಉದ್ಯಮಕ್ಕೆ ವ್ಯಾಪಕವಾದ ಬಳಕೆ, ಉಪಯೋಗ, ಉದ್ದೇಶ ಮುಂತಾದವು ಪ್ರಾಪ್ತವಾದುವು. ಕೃತಕಾಂಗ ನಿಜಾಂಗದೊಡನೆ ಆಕಾರಸಾಮ್ಯ ಹೊಂದಿರಬೇಕು; ಅದರ ಜೋಡಣೆಯಿಂದ ದೇಹದ ಸಹಜ ಸೌಂದರ್ಯ ಒದಗಬೇಕು ಮತ್ತು ಇಂಥ ಕೃತಕಾಂಗ ನಿಜ ಅಂಗದಷ್ಟಲ್ಲದಿದ್ದರೂ ಅದಕ್ಕೆ ಸರಿಸುಮಾರಾಗಿಯಾದರೂ ಸಮಾನವಾಗಿರುವಂತೆ ಉಪಯೋಗಾರ್ಹವಾಗಬೇಕು ಎಂದು ಜನ ಬಯಸಿದ್ದು ಸಹಜವೇ.
ದೇಹದ ಹೊರಗೆ ಕೃತಕವಾಗಿ ಜೋಡಿಸುವ ನಿರ್ಜೀವ ಅಂಗಗಳು : ಇವನ್ನು ಈ ಮುಂದೆ ಬರೆದಿರುವ ನಾಲ್ಕು ಪ್ರಧಾನ ಶೀರ್ಷಿಕೆಗಳಲ್ಲಿ ವಿವರಿಸಿದೆ-1 ಕೃತಕ ಕೈಕಾಲುಗಳು. 2 ಕೃತಕ ಕಣ್ಣು, 3.ಕೃತಕ ಶ್ವಾಸಕೋಶ, ಮೂತ್ರಜನಕಾಂಗಗಳು, 4.ಕೃತಕ ಹೃದಯ-ಶ್ವಾಸಕೋಶ ಯಂತ್ರ.

1.ಕೃತಕ ಕೈಕಾಲುಗಳು : ಕೃತಕ ಕೈಕಾಲುಗಳನ್ನು ಅಳವಡಿಸಿ ಆಕಾರ ಮಾತ್ರ ಸರಿಹೋಗುವಂತೆ ಮಾಡುವುದು ಪ್ರಯೋಜನವಿಲ್ಲ. ಅಳವಡಿಸಿದ ಅಂಗಗಳು ಸಾಧ್ಯವಾಗಿರುವಷ್ಟು ಕ್ರಿಯಾರ್ಹವಾಗಿರುವಂತೆ ಮಾಡುವುದು ಅಗತ್ಯ. ಈ ರೀತಿ ಉಪಯುಕ್ತವಾಗುವಂತೆ ಅವನ್ನು ಅಳವಡಿಸಿದ ಮೇಲೆ ಅವುಗಳ ಉಪಯೋಗವಿಧಾನದ ಶಿಕ್ಷಣವನ್ನು ಸಹ ಅಂಗಧಾರಿಗೆ ಕೊಡಬೇಕಾಗುತ್ತದೆ. ಕೃತಕ ಕಾಲಿಗೆ ಚಲನ ಸಾಮಥ್ರ್ಯದ ಜೊತೆಗೆ ದೇಹದ ಭಾರವನ್ನು ಹೊತ್ತು ದೃಢವಾಗಿ ನಿಂತುಕೊಳ್ಳುವ ದೃಢತೆಯೂ ಇರಬೇಕು. ಮರದಿಂದಲೊ ಹಗುರವಾದ ಲೋಹದಿಂದಲೆ ಅಥವಾ ಕ್ಯಾನ್‍ವಾಸಿನ ಮೇಲೆ ಪದರಪದರವಾಗಿ ಬಳಿದ ಪ್ಲಾಸ್ಟಿಕ್ಕಿನಿಂದಲೆ ಕೃತಕ ಕಾಲನ್ನು ತಯಾರುಮಾಡುತ್ತಾರೆ. ಪಾದದ ಮುಂಭಾಗ ಮಾತ್ರ ರಬ್ಬರಿನದು. ಕಾಲಿನ ಮೋಟಿಗೆ ಇದನ್ನು ಸಿಕ್ಕಿಸಿಕೊಂಡು ಪಟ್ಟಿಯಿಂದ ಭುಜಕ್ಕೊ ಎದೆಗೊ ಕಟ್ಟಿಕೊಳ್ಳುವಂತೆ ಇರುತ್ತದೆ.  ಇಲ್ಲವೇ ವಾಯು ಒತ್ತಡದಿಂದಲೇ ಕಾಲಿನ ಮೋಟಿಗೆ ಅಂಟಿಕೊಳ್ಳುವಂತೆ ಇರುತ್ತದೆ. ಹೇಗಿದ್ದರೂ ದೇಹದ ಭಾರ ಮೋಟಿನ ತುದಿಯಿಂದ ಕೃತಕ ಕಾಲಿನ ಮೇಲೆ ನೇರವಾಗಿ ಬೀಳದೆ ಇರುವಂತೆ ಇವನ್ನು ತಯಾರುಮಾಡಿದೆ. 

ಮಂಡಿಭಾಗದಲ್ಲಿ (ಮೊಳಕಾಲು) ಮಡಚುವ ಹಾಗೆ, ನಡೆಯುವಾಗ ಮಾತ್ರ ನೆಟ್ಟುಕೊಂಡಿರುವಂತೆ ಕೆಲವು ಕೃತಕ ಕಾಲುಗಳನ್ನು ಮಾಡಿರುತ್ತಾರೆ. ಕೃತಕ ಕಾಲುಗಳು ಭಾರವನ್ನು ಹೊತ್ತುಕೊಂಡು ನಡೆಯಲು ತಕ್ಕವಲ್ಲ ಮತ್ತು ಹಳ್ಳದಿಣ್ಣೆ ಪ್ರದೇಶಗಳಲ್ಲೂ ಉಪಯೋಗಿಸಲಾಗದಂಥವು. ಕೃತಕ ಕೈಗಳ ನಿರ್ಮಾಣ ಕೃತಕ ಕಾಲಿನ ನಿರ್ಮಾಣಕ್ಕಿಂತ ಕಷ್ಟಸಾಧ್ಯ. ಏಕೆಂದರೆ ಕೈಯಲ್ಲಿ ಚಲನೆ ಪ್ರಧಾನ. ಕೃತಕವಾಗಿ ಇಷ್ಟಬಂದಂಥ ಚಲನೆಯನ್ನು ಒದಗಿಸಿಕೊಳ್ಳುವುದು ಸುಲಭವಲ್ಲ. ಕೃತಕ ಕೈಯಲ್ಲಿ ಮೊಳಕೈಚಲನೆಯನ್ನು ಏರ್ಪಡಿಸಬಹುದಾದರೂ ಹಸ್ತದ ಚಲನಗಳನ್ನು ಒದಗಿಸುವುದು ಕಷ್ಟ. ಅದರಲ್ಲೂ ನೆಲದ ಮೇಲಿನಿಂದ ಸಾಮಾನುಗಳನ್ನು ಎತ್ತಿಕೊಳ್ಳಲು ಮತ್ತು  ಅವನ್ನು ಹಿಡಿದುಕೊಳ್ಳಲು ಅಗತ್ಯವಾದ ಹೆಬ್ಬೆರಳು ಮಿಕ್ಕ ಬೆರಳುಗಳೊಡನೆ ಮುಚ್ಚಿಕೊಳ್ಳಬೇಕಾದ ಚಲನೆಯನ್ನು ಕೃತಕವಾಗಿ ಏರ್ಪಡಿಸುವುದು ಬಹುಕಷ್ಟ.

ಕೃತಕ ಕೈ ಕೆಲವು ಸಾಮಾನುಗಳನ್ನು ಸ್ವಾಭಾವಿಕ ಕೈಗಿಂತ ಚೆನ್ನಾಗಿಯೂ ಬಿಗಿಯಾಗಿಯೂ ಹಿಡಿದುಕೊಳ್ಳಬಲ್ಲದು. ಆದರೆ ಎಲ್ಲ ಸಾಮಾನುಗಳನ್ನೂ ಉಪಯುಕ್ತರೀತಿಯಲ್ಲಿ ಹಿಡಿದುಕೊಳ್ಳುವುದು ಕೃತಕಕೈಗೆ ಅಸಾಧ್ಯ. ಏಕೆಂದರೆ ಹಾಗೆ ಹಿಡಿದುಕೊಳ್ಳಲು ಸ್ಪರ್ಶಜ್ಞಾನವೂ, ಅದರಿಂದ ಸಾಧ್ಯವಾಗುವ ಅನೇಕ ಸ್ನಾಯುಗಳ ಸಂಯುಕ್ತ ಕ್ರಿಯೆಯೂ ಅತ್ಯಗತ್ಯ. ಕೈಮೋಟಿಗೆ ಸಿಕ್ಕಿಸಿಕೊಳ್ಳಬಹುದಾದ ಅನೇಕ ಕೃತಕ ಹಸ್ತಗಳು ಇವೆ. ಆಯಾ ಸಂದರ್ಭದಲ್ಲಿ ತಕ್ಕ ರೀತಿಯ ಹಸ್ತವನ್ನು ಅಳವಡಿಸಿಕೊಳ್ಳಬಹುದಾದ ರೀತಿ ಸಾಮಾನ್ಯವಾಗಿ ವಾಡಿಕೆಯಲ್ಲಿದೆ. ಕೃತಕ ಕೈಯ ಹೆಬ್ಬೆರಳಿನಿಂದ ಒಯ್ದ ಒಂದು ತಂತಿಯನ್ನು ಭುಜದ ಮೇಲುಗಡೆಯಿಂದ ಬೆನ್ನಿಗೆ ಹಾಯಿಸಿ ಕಟ್ಟುವಂತೆ ಏರ್ಪಾಡು ಮಾಡಿರುವುದು ಉಂಟು. ಬೆನ್ನಿನ ಸ್ನಾಯುಗಳನ್ನು ಬೇಕಾದಂತೆ ಐಚ್ಛಿಕವಾಗಿ ಚಲಿಸಿ ಕೃತಕ ಹೆಬ್ಬೆರಳನ್ನು ತಕ್ಕಮಟ್ಟಿಗೆ ಬೇಕಾದ ಹಾಗೆ ಚಲಿಸಬಹುದಾಗಿದೆ. ಕೈಮೋಟಿನ ಸ್ನಾಯುಗಳ ತುದಿಗೆ ಪ್ಲಾಸ್ಟಿಕ್ ಬೆಣೆಗಳನ್ನು ಅಡ್ಡವಾಗಿ ತೂರಿಸಿ, ಆ ಬೆಣೆಗಳಿಗೆ ಕೃತಕಹಸ್ತದ ಬೆರಳುಗಳನ್ನು ತಂತಿಯಿಂದ ಬಿಗಿದು ಮೋಟಿನ ಸ್ನಾಯುಗಳ ಐಚ್ಛಿಕ ಕ್ರಿಯೆಯಿಂದ ಕೃತಕ ಬೆರಳುಗಳು ತಕ್ಕಮಟ್ಟಿಗೆ ಐಚ್ಛಿಕವಾಗಿ ಚಲಿಸುವಂತೆಯೂ ಹಲವು ಸಾರಿ ಏರ್ಪಾಡು ಮಾಡಬಹುದು. ಇತ್ತೀಚೆಗೆ ಕೈಮೋಟಿನ ಸ್ನಾಯುಗಳಿಂದಾಗುವ ಒತ್ತಡ ವ್ಯತ್ಯಾಸ ಅಥವಾ ಆಕಾರ ವ್ಯತ್ಯಾಸದಿಂದ ಚಲಿಸಲ್ಪಡುವ ಸಣ್ಣವಿದ್ಯುಚ್ಚಾಲಿತ ಮೋಟಾರುಗಳಿಂದ ಕೃತಕಹಸ್ತದ ಬೆರಳುಗಳು ತೆರೆದುಕೊಳ್ಳುವಂತೆಯೂ ಮುಚ್ಚಿಕೊಳ್ಳುವಂತೆಯೂ ಏರ್ಪಾಡುಮಾಡಲಾಗಿದೆ. ಪ್ರತಿಯೊಂದರಲ್ಲಿಯೂ ಯಾಂತ್ರಿಕವಾಗಿ ಶಕ್ತಿಯನ್ನು ಒದಗಿಸಿ ಬೆರಳುಗಳು ಮಡಚಿಕೊಳ್ಳುವಂತೆ ಮಾಡುವುದೇ ಪ್ರಧಾನವಾಗಿರುವುದರಿಂದ ಮಡಚುವಿಕೆ ಅನೇಕವೇಳೆ ತಕ್ಕಷ್ಟು ಶಕ್ತಿಯುತವಾಗಿಲ್ಲದೆಯೂ ಕೆಲವುವೇಳೆ ಅನಾವಶ್ಯಕವಾಗಿ ಬಹು ಬಿಗಿತ ಉಂಟಾಗಿ ಕಾರ್ಯ ಸಾಫಲ್ಯ ಸಹಜಸ್ಥಿತಿಗಿಂತ ಬಹುಕಡಿಮೆ ಮಟ್ಟದ್ದಾಗಿಯೇ ಇರುತ್ತದೆ. ಕೃತಕ ಕೈಗಳನ್ನು ಹಗುರಲೋಹದಿಂದ ಮಾಡಿರುತ್ತಾರೆ. ಇಡೀ ಕೈಯನ್ನು ಮುಚ್ಚಿಕೊಳ್ಳುವಂಥ ಮೃದುವಾದ ಪ್ಲಾಸ್ಟಿಕ್ ಕೈಚೀಲವಿರುತ್ತದೆ. ಇದಕ್ಕೆ ಬುದ್ಧಿವಂತ ಕುಶಲಿಗಳು ಬಣ್ಣ, ಕೂದಲು, ಗೆರೆಗಳು ಎಲ್ಲವನ್ನೂ ತೀರ ಸ್ವಾಭಾವಿಕವಾಗಿ ಕಾಣುವಂತೆ ಅಳವಡಿಸಿಬಲ್ಲರು. ಹೊರನೋಟಕ್ಕೆ ಕೃತಕ ಕೈಗೂ ಸ್ವಾಭಾವಿಕ ಕೈಗೂ ವ್ಯತ್ಯಾಸವೇ ತೋರದಂತೆ ಇರುತ್ತದೆ. 

	2. ಕೃತಕ ಕಣ್ಣು : ಆಕಾರದ ಪುನಃಪ್ರಾಪ್ತಿಗೆ ಮಾತ್ರ ಇದು ಸಹಾಯಕ. ನೋಡಲು ಇದರಿಂದ ಆಗದು. ಒಂದು ಕಣ್ಣುಗುಡ್ಡೆ ಯಾವ ಕಾರಣದಿಂದಲಾದರೂ ಇಂಗಿಹೋದಾಗ ಅಥವಾ ಶಸ್ತ್ರಕ್ರಿಯೆಯಿಂದ ತೆಗೆದು ಹಾಕಲ್ಪಟ್ಟಾಗ ಕೃತಕವಾದ ಬೇರೆ ಗುಡ್ಡೆಯನ್ನು ಆ ಸ್ಥಳದಲ್ಲಿ ಹುದುಗಿಸಿ ಕಣ್ಣು ಊನವೇ ಆಗಿಲ್ಲವೇನೋ ಎನ್ನುವಷ್ಟು ವ್ಯವಸ್ಥೆಮಾಡಬಹುದು. ಮೊದಲು ಒಂದು ಪ್ಲಾಸ್ಟಿಕ್ ಅಥವಾ ಲೋಹದ ಗೋಳವನ್ನು ಗುಡ್ಡೆ ಇದ್ದ ಸ್ಥಳದಲ್ಲಿ ಇಟ್ಟು ಕಣ್ಣಿನ ಸ್ನಾಯುಗಳನ್ನು ಅದರ ಮುಂದೆ ಸೇರಿಸಿ ಹೊಲಿಯುತ್ತಾರೆ. ಆಮೇಲೆ ಒಂದು ಡುಬ್ಬಾದ ಮತ್ತು ಹಗುರವಾದ ಪ್ಲಾಸ್ಟಿಕ್ ಅಥವಾ ಗಾಜಿನ ಚಿಪ್ಪನ್ನು ಅದರ ಮುಂದೆ ಇಟ್ಟು ಅದನ್ನು ಕಣ್ಣು ಎವೆಗಳ ಹಿಂದೆ ಹುದುಗಿಸುತ್ತಾರೆ. ಈ ಚಿಪ್ಪಿನಮೇಲೆ ತಕ್ಕ ಬಣ್ಣಗಳಲ್ಲಿ ಕಣ್ಣು ಹೇಗಿರುತ್ತದೋ ಅದೇ ಮಾದರಿಯ ವಿನ್ಯಾಸವಿರುತ್ತದೆ. ಆ ವ್ಯಕ್ತಿಯ ಇನ್ನೊಂದು ಕಣ್ಣಿನ ಚಿಪ್ಪಿನ ಹಾಗೆಯೆ ಇರುವಂಥ ಚಿಪ್ಪನ್ನು ಆರಿಸಿಕೊಂಡು ಅಳವಡಿಸುತ್ತಾರÉ. ಒಳಗಿನ ಪ್ಲಾಸ್ಟಿಕ್ ಅಥವಾ ಲೋಹದ ಗೋಳದ ಮುಂದೆ ಒಂದು ತುಂಡು ಕಡ್ಡಿಯನ್ನು ಅಕ್ಷದ ಹಾಗೆ ನೆಟ್ಟಿದ್ದರೆ ಕೃತಕ ಚಿಪ್ಪನ್ನು ತಕ್ಕಮಟ್ಟಿಗೆ ಸ್ವಾಭಾವಿಕ ಕಣ್ಣಿನಂತೆಯೇ ಚಲಿಸಬಹುದು.

	3.ಕೃತಕ ಶ್ವಾಸಕೋಶ ಮತ್ತು ಕೃತಕ ಮೂತ್ರಜನಕಾಂಗಗಳು : ಕೃತಕ ಕೈಕಾಲುಗಳಂತೆ ಕ್ರಿಯಾಶೀಲವಾಗಿರುವ ಕೃತಕಸಾಧನಗಳನ್ನು ದೇಹದ ಹೊರಗೆ ಅಳವಡಿಸಿ ಅವುಗಳ ಅನುಕೂಲತೆಯನ್ನು ಪಡೆಯುವುದನ್ನು ಕೃತಕ ಶ್ವಾಸಕೋಶದಲ್ಲಿ ಕಾಣಬಹುದು. ನೀರಿನಲ್ಲಿ ಮುಳುಗಿದುದರಿಂದ, ಇಂಗಾಲದ ಮಾನಾಕ್ಸೈಡ್ ವಿಷವೇರುವಿಕೆಯಿಂದ,  ವಿದ್ಯುದಾಘಾತದಿಂದ ಅಥವಾ ಪೋಲಿಯೋ ಮೈಯಲೈಟಿಸ್ ರೋಗದ ಪರಿಣಾಮದಿಂದ ಶ್ವಾಸಸ್ತಂಭನವಾಗಿದ್ದರೆ ಅಂಥವರಲ್ಲಿ ಕೃತಕಶ್ವಾಸಕ್ರಿಯೆಯ ಅಗತ್ಯವಿರುತ್ತದೆ. ಉಸಿರುತಡೆಯಾಗಿದ್ದಾಗ ಈ ವ್ಯಕ್ತಿಗಳನ್ನು ಕೃತಕಶ್ವಾಸಕೋಶಗಳಿಗೆ ಜೋಡಿಸಿ ಇಟ್ಟು ಎಷ್ಟು ಹೊತ್ತು ಬೇಕಾದರೂ ಯಾವ ಪ್ರಮಾಣದಲ್ಲಿ ಬೇಕಾದರೂ ಶ್ವಾಸಕ್ರಿಯೆ ಕೃತಕವಾಗಿ ನಡೆಯುತ್ತಿರುವಂತೆ ಏರ್ಪಾಡು ಮಾಡಬಹುದು. ಕೃತಕ ಶ್ವಾಸಕೋಶದ ಒಳಗಡೆ ಒತ್ತಡ ಕ್ರಮವಾಗಿ ಹೆಚ್ಚು ಅಥವಾ ಕಡಿಮೆ ಆಗುವ ಏರ್ಪಾಡಿದ್ದು ಒತ್ತಡ ಕಡಿಮೆಯಾದಾಗ ಉಸಿರು ಎಳೆದುಕೊಳ್ಳುವುದೂ ಹೆಚ್ಚಾದಾಗ ಉಸಿರುಬಿಡುವುದೂ ಕಂಡುಬರುತ್ತದೆ. ಸಹಜ ಶ್ವಾಸಕ್ರಿಯೆ ಏರ್ಪಡುವವರೆಗೂ ಈ ಕೃತಕ ಶ್ವಾಸಕೋಶವನ್ನು ಉಪಯೋಗಿಸುತ್ತಿರಬೇಕು. ಮೂತ್ರಪಿಂಡಗಳು ರೋಗಪೀಡಿತವಾಗಿ ಮೂತ್ರೋತ್ಪತ್ತಿಗೆ ತಡೆಯುಂಟಾದಾಗ ಸಹಜಮೂತ್ರೋತ್ಪತ್ತಿ ಏರ್ಪಡುವವರೆಗೂ ಕೃತಕ ಮೂತ್ರಜನಕಾಂಗವನ್ನು ಉಪಯೋಗಿಸಬೇಕಾಗುತ್ತದೆ. ಹದಗೆಟ್ಟ ಮೂತ್ರಪಿಂಡಗಳು ಕೆಲವು ವೇಳೆ ತಮ್ಮ ಕಾರ್ಯವನ್ನು ಪುನಃ ಆರಂಭಿಸಲಾರವು. ಅವು ಅಷ್ಟು ಕ್ಷತಿಗೊಂಡಿರುತ್ತವೆ. ಹಾಗಾದಾಗ ಬೇರೆ ಮೂತ್ರಪಿಂಡಗಳನ್ನು ಇವುಗಳ ಬದಲು ಅಳವಡಿಸುವತನಕ, ಅಂದರೆ ಬಹುಶಃ ದೀರ್ಘಕಾಲ, ಕೃತಕಮೂತ್ರಜನಕಾಂಗವನ್ನು ಉಪಯೋಗಿಸುತ್ತಿರಬೇಕು. ದೇಹದಲ್ಲಿನ ರಕ್ತವನ್ನು ಹೆಪ್ಪುಗಟ್ಟದಂತೆ ಏರ್ಪಾಡುಮಾಡಿ, ಅದು ಹೊರಪ್ರವಹಿಸಿ ಕೃತಕಮೂತ್ರಜನಕಾಂಗದಲ್ಲಿ ಹೊಕ್ಕುಬರುವಂತೆ ಮಾಡುತ್ತಾರೆ. ಆಗ ಅದು ತನ್ನ ಕಶ್ಮಲವನ್ನೆಲ್ಲ ಕಳೆದುಕೊಂಡು ಶುದ್ಧವಾಗುತ್ತದೆ. ಆಮೇಲೆ ಆ ರಕ್ತವನ್ನು ಪುನಃ ದೇಹದ ಒಳಹೊಗಿಸುತ್ತಾರೆ.

	4.ಕೃತಕ ಹೃದಯ-ಶ್ವಾಸಕೋಶ ಯಂತ್ರ : 1868ರಿಂದಲೂ ರಕ್ತವನ್ನು ಕೃತಕವಾಗಿ ಗಾಳಿಯ ಪರಿಣಾಮಕ್ಕೆ ಒಡ್ಡುವ ಪ್ರಯತ್ನ ನಡೆದಿದೆ. ಆದರೆ ಸುಮಾರು 1953ರ ತನಕ ಹೆಚ್ಚು ಸಾಧಿಸಲಾಗಲಿಲ್ಲ. ಇದರ ಜೊತೆಗೆ ಇದರಲ್ಲಿ ಹೃದಯದ ಕೆಲಸವನ್ನೂ ಕೃತಕವಾಗಿ ಸೇರಿಸುವ ವಿಧಾನವನ್ನೂ ಯೋಜಿಸಲಾಯಿತು. ಅಂತೆಯೇ ಆ ಸುಮಾರಿನಲ್ಲಿ ಜಾನ್ ಗಿಬ್ಬನ್ ಎಂಬಾತ ಕೃತಕ ಹೃದಯ-ಶ್ವಾಸಕೋಶ ಯಂತ್ರವನ್ನು ಕಂಡುಹಿಡಿದ. ಇಲ್ಲೂ ದೇಹದ ರಕ್ತ  ಹೆಪ್ಪುಗಟ್ಟುವಂತೆ ನಾಳಗಳ ಮೂಲಕ ಹೊರಸಾಗಿಸಿ ಕೃತಕ ಹೃದಯ-ಶ್ವಾಸಕೋಶಯಂತ್ರಕ್ಕೆ ಒಯ್ಯುತ್ತಾರೆ. ಅಲ್ಲಿ ರಕ್ತ ಗಾಳಿಗೆ ಒಡ್ಡಲ್ಪಟ್ಟು ಆಮ್ಲಜನಕವನ್ನು ಹೀರಿಕೊಂಡು ಇಂಗಾಲದ ಡೈ ಆಕ್ಸೈಡನ್ನು ಕಳೆದುಕೊಂಡು ಬೇರೆ ನಾಳದ ಮೂಲಕ ಎಷ್ಟು ಬೇಕೋ ಅಷ್ಟು ಒತ್ತಡದಿಂದ ಅಯೋರ್ಟಕ್ಕೆ ದಬ್ಬಲ್ಪಡುತ್ತದೆ. ರಕ್ತ ಸ್ವಾಭಾವಿಕ ಹೃದಯ-ಶ್ವಾಸಕೋಶಗಳಿಂದ ಹೊರಗೇ ಇದ್ದು ಆ ಅಂಗಗಳಲ್ಲಿ ರಕ್ತಪರಿಚಲನೆಯೇ ಇಲ್ಲದಿರುವುದರಿಂದ ಅವುಗಳಲ್ಲಿ ಬೇಕಾದ ಶಸ್ತ್ರ ಚಿಕಿತ್ಸೆಗಳನ್ನು ಸುಲಭವಾಗಿ ಮಾಡಿ ಮುಗಿಸಬಹುದು.

	ದೇಹದ ಒಳಗೆ ಕೃತಕವಾಗಿ ಜೋಡಿಸುವ ನಿರ್ಜೀವ ಅಂಗಗಳು : ದೇಹದ ಒಳಗೆ ನಿರ್ಜೀವ ಕೃತಕ ಅಂಗಗಳನ್ನು ಅಳವಡಿಸಿಯೂ ದೇಹಕಾರ್ಯಗಳು ಸ್ವಾಭಾವಿಕವಾಗಿ ಜರಗುವಂತೆ ಮಾಡಿರುತ್ತಾರೆ. ಕೃತಕ ಅಂಗಗಳು ಪೂರ್ಣವಾಗಿ ತಾವೇ ಒಂದು ಜೀವಕಾರ್ಯವನ್ನು ಜರಗಿಸಬಹುದು ಅಥವಾ ಸಹಾಯಕವಾಗಿ ಇರಬಹುದು. ಇಂಥವನ್ನು ಲೋಹ, ಪ್ಲಾಸ್ಟಿಕ್ ಅಥವಾ ಪ್ರಾಣಿಗಳ, ಮನುಷ್ಯರ ನಿರ್ಜೀವ ಅಂಗಗಳಿಂದ ಮಾಡಿರುತ್ತಾರೆ. ಮುಖ್ಯವಾಗಿ ಸರಳ ರೀತಿಯ ಯಾಂತ್ರಿಕತೆಯೇ ಪ್ರಧಾನವಾದ ಜಡಸ್ವಭಾವದ ಅಂಗಗಳಾದ ಇವು ಶುದ್ಧ ರಕ್ತನಾಳಗಳು, ಕೀಲುಗಳು ಇತ್ಯಾದಿಗಳಿಗೆ ಬದಲಾಗಿ ಉಪಯೋಗಕ್ಕೆ ಬರುತ್ತವೆ. ಹೀಗೆ ನಿರ್ಜೀವ ಹೊರವಸ್ತುಗಳನ್ನು ಒಳಹೊಗಿಸುವಾಗ ಸೋಂಕು ಇರಬಾರದು. ಇದ್ದರೆ ಇವು ದೇಹದಿಂದ ವಿಸರ್ಜಿಸಲ್ಪಡುತ್ತವೆ. ಸುತ್ತಮುತ್ತಲಿನ ಸ್ವಾಭಾವಿಕ ಅಂಗಗಳಿಗೆ ಭೌತಿಕವಾಗಿ ಮತ್ತು ರಾಸಾಯನಿಕವಾಗಿ ಇವು ಹೊಂದಿಕೊಳ್ಳುವಂತಿರಬೇಕು. ರಂಧ್ರಗಳಿರಬಹುದು. ನೀರಿನಲ್ಲಿ ಕಿಂಚಿತ್ತೂ ಕರಗದೇ ಇರುವಂಥವಾಗಿರಬೇಕು. ಇಲ್ಲದಿದ್ದರೆ ವಿಷಾಣುರಹಿತ ಊತ ಉಂಟಾಗಿ ಈ ವಸ್ತುಗಳು ವಿಸರ್ಜಿಸಲ್ಪಡುತ್ತವೆ. ವೈಟಾಲಿಯಂ, ಸ್ಟೇನ್‍ಲೆಸ್‍ಸ್ಟೀಲ್, ಏರೋಪ್ಲೇನ್ ಲೋಹ, ನೈಲಾನ್, ಟೆರಿಲೀನ್, ಪಾಲಿಥೀನ್ ಇವುಗಳಿಗೆ ಈ ಸ್ವಭಾವ ಇರುವುದರಿಂದ ಇವು ಅನುಕೂಲವಸ್ತುಗಳು. ಇವುಗಳಿಂದ ತಯಾರುಮಾಡಿದ ಅಂಗಗಳನ್ನು ದೇಹದ ಒಳಗೆ ಜೋಡಿಸಿದಾಗ ಇವು ದೇಹದ ಸ್ವಾಭಾವಿಕ ತುಯ್ತ ಧಕ್ಕೆಗಳಿಗೆ ಜಗ್ಗದೆ ಇರುವಷ್ಟು ಶಕ್ತಿಯುತವಾಗಿದ್ದು ಇರಬೇಕಾದ ಸ್ಥಾನಗಳಲ್ಲಿ ಕದಲದೆ ಇರುವಂತೆ ಬಿಗಿಯಾಗಿ ಬಂಧಿಸಲ್ಪಡಬೇಕು. ಸೊಂಟ ಪ್ರದೇಶದಲ್ಲಿ ಕೀಲನ್ನು ನಿರ್ಮಿಸಿ ಕೃತಕಕಾಲನ್ನು ಅಳವಡಿಸಿದರೆ ಆ ಕೀಲು ಕೆಲವೇ ವರ್ಷಗಳಲ್ಲಿ ಒಂದು ಮೋಟಾರು ಕಾರಿಗೆ ಅದೇ ಕಾಲದಲ್ಲಿ ಆಗುವಷ್ಟು ಧಕ್ಕೆಯನ್ನು ತಡೆದುಕೊಳ್ಳಬೇಕಾಗುತ್ತದೆ. ಅಂದಮೇಲೆ ಕೃತಕಕೀಲು ಯಾವ ಸ್ವಭಾವದ್ದಾಗಿರಬೇಕು ಎನ್ನುವುದು ಅರ್ಥವಾಗುತ್ತದೆ. ಈ ವಿಭಾಗವನ್ನು ಮುಂದಿನ ಆರು ಉಪಶೀರ್ಷಿಕೆಗಳಲ್ಲಿ ಚರ್ಚಿಸಿದೆ.

	1, ಕೃತಕ ಕೀಲುಗಳು : ವೈಟಾಲಿಯಂ ಲೋಹವನ್ನು ದೇಹದ ಒಳಗೆ ಸೇರಿಸಿದಾಗ ಅದು ಯಾವ ಪ್ರತಿಕೂಲ ಪ್ರತಿಕ್ರಿಯೆಯನ್ನೂ ತೋರಿಸುವುದಿಲ್ಲವೆಂದು ಸ್ಮಿತ್ ಪೀಟರ್‍ಸನ್ ಎಂಬಾತ ಕಂಡುಹಿಡಿದ (1938). ಅಂದಿನಿಂದ ಈ ಲೋಹವನ್ನು ಅನೇಕ ಸಂದರ್ಭಗಳಲ್ಲಿ ಉಪಯೋಗಿಸಲು ತೊಡಗಿದ್ದಾರೆ. ತಲೆ ಒಡೆದು ಹೋದಾಗ, ಮುರಿದ ತಲೆಚಿಪ್ಪಿನ ಬದಲು ಇದರ ತಗಡನ್ನು ಉಪಯೋಗಿಸಲಾಗಿದೆ. ತೊಡೆಯ ಮೂಳೆ ಅಥವಾ ಕೀಲಿನಲ್ಲಿ ವ್ಯಾಧಿ ಅಥವಾ ಅಘಾತವಾಗಿದ್ದರೆ ಮತ್ತು ಯಾವ ಕಾರಣದಿಂದಲಾದರೂ ಆ ಭಾಗಗಗಳನ್ನು ಶಸ್ತ್ರಕ್ರಿಯೆಯಿಂದ ತೆಗೆದುಹಾಕಬೇಕಾಗಿದ್ದರೆ ವೈಟಾಲಿಯಂ ತಗಡನ್ನು ಉಪಯೋಗಿಸಿ ಆಯಾ ಭಾಗಗಳ ಜೀರ್ಣೋದ್ಧಾರ ಮಾಡಿದೆ. ಹೀಗೆ ತೊಡೆಮೂಳೆಯ ತಲೆಭಾಗ, ಕೀಲಿನ ಎದುರು ಬದಿರಾದ ಸವೆಯುವ ಭಾಗಗಳು ಪೂರ್ಣವಾಗಿ ತೊಡೆ ದೇಹಕ್ಕೆ ಸೇರಿಕೊಳ್ಳುವ ಕೀಲು ಇವನ್ನೆಲ್ಲ ಮಾಡಿ ನಿಷ್ಕ್ರಿಯಗೊಂಡ ಭಾಗಗಳ ಬದಲು ಅಳವಡಿಸಲಾಗಿದೆ. ಕೀಲಿನ ಒಂದು ಭಾಗದ ಮೂಳೆಯನ್ನು ಮಾತ್ರ ಪಲ್ಲಟಿಸಿದ್ದರೆ ಈ ಕೃತಕಕೀಲು ಸ್ವಾಭಾವಿಕವಾಗಿರುವಂತೆಯೇ ಕೆಲಸ ಮಾಡಲು ಶಕ್ತವಾಗಿರುತ್ತದೆ. ಏಕೆಂದರೆ ಕಾಲ ಕ್ರಮೇಣ ಅಭಿಮುಖವಾದ ಆರೋಗ್ಯವಾದ ಮೂಳೆಯ ನಿರಂತರ ಸ್ವಾಭಾವಿಕ ಮಾರ್ಪಾಡಿನಿಂದ ಸವೆತ ಸಕ್ರಮಗೊಳ್ಳುತ್ತಲೇ ಇರುತ್ತದೆ. ಕೀಲಿನಲ್ಲಿ ಸಂಧಿಸುವ ಎರಡೂ ಮೂಳೆಗಳನ್ನು ಲೋಹದ ಅಳವಡಿಕೆಯಿಂದ ಸಹಜಸ್ಥಿತಿಗೆ ತಂದು ಜೋಡಿಸಿದ್ದರೆ ಈ ಕಾಲಕ್ರಮೇಣ ಆಗುವ ಸವೆತಕ್ಕೆ ತಕ್ಕ ಪ್ರತಿಕ್ರಿಯೆ ಒದಗದೆ ಕ್ರಮೇಣ ಕೀಲು ಅಪ್ರಯೋಜಕವಾಗುವುದು. ಸಾಮಾನ್ಯವಾಗಿ ಈ ರೀತಿ ಕೃತಕಕೀಲನ್ನು ವಯಸ್ಸಾದವರಲ್ಲಿ ಮಾತ್ರ ಅಳವಡಿಸುವುದರಿಂದ ಅದರ ಬಹುಕಾಲಿಕ ಉಪಯುಕ್ತತೆ ಅಥವಾ ಅನುಪಯುಕ್ತತೆಯನ್ನು ಅಳೆದು ಅಂದಾಜು ಮಾಡಲು ಸಾಧ್ಯವಾಗಿಲ್ಲ. ಲೋಹದ ಭಾಗಗಳನ್ನು ಸುತ್ತಲಿನ ಆರೋಗ್ಯವಾದ ಮೂಳೆಗಳಿಗೆ ಜರಗುವಂತೆ ಸೇರಿಸುವುದೂ ಒಂದು ತೊಡಕಿನ ವಿಷಯ. ಮೊಳೆ ಹೊಡೆದು ಸೇರಿಸಿದರೆ ಕ್ರಮೇಣ ಮೊಳೆಗಳು ಸಡಿಲವಾಗುತ್ತವೆ. ಇದನ್ನು ತಪ್ಪಿಸಲು ಇನ್ನೂ ಯಾವ ಉಪಾಯವೂ ತಿಳಿದಿಲ್ಲ. ಮೂಳೆಚೂರುಗಳನ್ನು ಬೆಣೆ ಮೊಳೆಗಳ ಹಾಗೆ ಉಪಯೋಗಿಸಿದರೆ ಮುಂದೆ ಪರಿಣಮಿಸುವ ಪ್ರತಿಕ್ರಿಯೆ ಸ್ವಲ್ಪಮಟ್ಟಿಗೆ ಸಹಜ ರೀತಿಯದಾಗಿದ್ದು ಅನುಕೂಲವಾಗಿರುವುದೇನೋ ಎಂದು ಯೋಚಿಸಲಾಗಿದೆ. ಸಂಧಿವಾತದಿಂದ ಅಥವಾ ಬೇರೆ ಕಾರಣಗಳಿಂದ ಘಾತವಾದ ಬೆರಳು ಕೀಲುಗಳನ್ನೂ ಮೊಣಕೈ ಮೊಣಕಾಲುಗಳನ್ನೂ ಇದೇ ರೀತಿ ಕೃತಕವಾಗಿ ಪುನವ್ರ್ಯವಸ್ಥೆಗೊಳಿಸಿ ಸ್ವಾಭಾವಿಕ ಆಕಾರ ಮತ್ತು ಕ್ರಿಯೆ ಒದಗುವಂತೆ ಪ್ರಯತ್ನಿಸಿದ್ದಾರೆ. ಆದರೆ ಕೀಲು ಅಥವಾ ಮೂಳೆಗಳು ಸಣ್ಣದಾದ ಹಾಗೆ ಲೋಹದ ತಗಡನ್ನು ಅಲ್ಲಿ ಜೋಡಿಸುವುದು ಪ್ರಯಾಸದ ಕೆಲಸವೆನ್ನುವುದು ವ್ಯಕ್ತವಾಗಿಯೇ ಇದೆ. 

	2.ಕೃತಕ ಶುದ್ಧ ರಕ್ತನಾಳಗಳು : 1950ರಿಂದ ಈಚೆಗೆ ಈ ಪ್ರಯತ್ನ ನಡೆದಿದೆ. ಶುದ್ಧರಕ್ತನಾಳಗಳನ್ನು ಒಂದಕ್ಕೊಂದು ಸೇರಿಸಿ ಹೊಲೆಯುವ ವಿಧಾನ ಈ ಶತಮಾನದ ಪ್ರಾರಂಭದಲ್ಲೇ ತಿಳಿದು ಬಂದಿದ್ದರೂ ಅದನ್ನು ಪ್ರಾಣಿಗಳಲ್ಲಿ ಪ್ರಯೋಗಗಳಿಗಾಗಿ ಮಾತ್ರ ಅನುಸರಿಸುತ್ತಿದ್ದರು. ಅಳವಡಿಸಲು ಯೋಗ್ಯವಾದ ವಸ್ತು ದೊರೆತಾಗ ಕೃತಕವಾಗಿ ರಕ್ತನಾಳವನ್ನು ಸೃಷ್ಟಿಸಿ ಅಳವಡಿಸುವುದು ಸಾಧ್ಯವಾಯಿತು. ವಾಸ್ತವವಾಗಿ ಯೋಗ್ಯವಾದ ವಸ್ತು ದೊರೆಯುವತನಕ ಕಾಯಲೇ ಇಲ್ಲ. ಏಕೆಂದರೆ ಮೊತ್ತಮೊದಲಾಗಿ ಶುದ್ಧ ರಕ್ತನಾಳವನ್ನು ಸೃಷ್ಟಿಸಿ ಸೇರಿಸಿ ಹೊಲೆದದ್ದು ವಾಸ್ತವಿಕವಾಗಿ ರೋಗಿ ಧರಿಸಿದ ಷರಟಿನ ಎರಡು ಉದ್ದನೆಯ ಚೂರುಗಳನ್ನು ಉಪಯೋಗಿಸಿಯೇ ಎಂದು ತಿಳಿದು ಬಂದಿದೆ. ಟೆರಿಲೀನ್ ವಸ್ತು ಕೃತಕಶುದ್ಧರಕ್ತನಾಳದ ನಿರ್ಮಾಣಕ್ಕೆ ಅನುಕೂಲ ವಸ್ತು. ಆದರೆ ಈ ವಸ್ತುವಿನ ಗಮನಾರ್ಹವಾದ ಒಂದು ಕೊರತೆ ಏನೆಂದರೆ ಅದು ಅನೇಕ ವೇಳೆ ಹೊರಚಲನದ ದೆಸೆಯಿಂದ ಮಡಚಿಕೊಂಡುಬಿಡುವುದು. ಟೆರಿಲೀನ್ ನಾಳಗಳನ್ನು ಶುದ್ಧರಕ್ತನಾಳಗಳಿಗೆ ಸೇರಿಸಿ ಹೊಲೆದಾಗ ಉಂಟಾದ ತೂತುಗಳು ರಕ್ತಹೆಪ್ಪು ಗಟ್ಟುವಿಕೆಯಿಂದ ಮುಚ್ಚಲ್ಪಡುವುದರಿಂದ ರಕ್ತಸ್ರಾವದ ಹೆದರಿಕೆ ಇರುವುದಿಲ್ಲ. ಹೊಲೆದ ಸ್ಥಳ ಕ್ರಮೇಣ ರಕ್ತನಾಳಕ್ಕೆ ಸೇರ್ಪಡೆಯಾಗುವುದರಿಂದ ಸೃಷ್ಟಿಸಿದ ರಕ್ತನಾಳ ಕಳಚಿಕೊಂಡು ಬರುತ್ತದೆ ಎನ್ನುವ ಹೆದರಿಕೆಯೂ ಇರುವುದಿಲ್ಲ. ಮಡಚಿಕೊಳ್ಳದಂತೆ ಏನಾದರೂ ಏರ್ಪಾಡು ಮಾಡಿದರೆ, ಕೃತಕ ರಕ್ತನಾಳಗಳಲ್ಲಿ ರಕ್ತ ವೇಗವಾಗಿ ಪ್ರವಹಿಸುತ್ತಿರುವವರೆಗೂ, ಹೆಪ್ಪುಗಟ್ಟುವುದಕ್ಕೆ ಅವಕಾಶವಿಲ್ಲದೆ, ಈ ಸಾಧನ ಬಹು ಉಪಯುಕ್ತವಾಗಿಯೇ ಇರುತ್ತದೆ. ಆದರೆ ಈ ಹೆದರಿಕೆಗಳು ಇದ್ದೇ ಇರುತ್ತವೆ.

	3.ಕೃತಕ ಹೃದಯಕವಾಟಗಳು : ಅಯೋರ್ಟದ ಕವಾಟಗಳೇ ಮಿಕ್ಕ ಎಲ್ಲ ಕವಾಟಗಳಿಗಿಂತ ಹೆಚ್ಚಾಗಿ ವ್ಯಾಧಿಗ್ರಸ್ತವಾಗಿ ನಿಷ್ಪ್ರಯೋಜಕವಾಗುತ್ತವಾದ್ದರಿಂದ ಆ ಕವಾಟಗಳನ್ನು ಕೃತಕವಾಗಿ ನಿರ್ಮಿಸುವುದು ವಾಡಿಕೆ. ಸೀಮೆಎಣ್ಣೆ ಪಂಪಿನಲ್ಲಿರುವಂತೆ ಒಂದು ಲೋಹದ ಅಥವಾ ಪ್ಲಾಸ್ಟಿಕ್ ಗೋಲಿಗಳನ್ನು ಅಯೋರ್ಟದ ಒಳಗೆ ಅಳವಡಿಸಿ ಅದು ಕವಾಟದಂತೆ ಕ್ರಿಯೆಗೊಳ್ಳುವಹಾಗೆ ಮಾಡುವುದಾಗಿದೆ. ಇದನ್ನು ಸ್ಟಾರ್ ಎಂಬ ವೈದ್ಯ ವಿಜ್ಞಾನಿಯ ಹೆಸರಿನಿಂದ ಸ್ಟಾರ್ ಕವಾಟವೆಂದು ಕರೆಯುತ್ತಾರೆ. ಮರಣಾನಂತರ ಪ್ರಾಣಿಗಳಿಂದ, ಮುಖ್ಯವಾಗಿ ಹಂದಿಗಳಿಂದ, ಅಯೋರ್ಟದ ಕವಾಟಗಳನ್ನು ತೆಗೆದುಕೊಂಡು ಅವನ್ನು ಶೈತ್ಯಾಧಿಕ್ಯದಿಂದ ನಿರ್ಜಲೀಕರಿಸಿದರೆ ಅಂಥ ಸ್ವಾಭಾವಿಕ ಕವಾಟಗಳನ್ನು ಸಹ ಶಸ್ತ್ರಕ್ರಿಯೆಯಿಂದ ಅನುಪಯುಕ್ತವಾದ ಕವಾಟಗಳಿಗೆ ಬದಲಾಗಿ ಅಳವಡಿಸಬಹುದು. ರಕ್ಷಿಸಿಡಲ್ಪಟ್ಟ ಇಂಥ ಕವಾಟಗಳು ವಾಸ್ತವವಾಗಿ ನಿರ್ಜೀವ ವಸ್ತುಗಳೇ ಆದ್ದರಿಂದ ಜೋಡಣೆ ಆದ ವ್ಯಕ್ತಿಯಲ್ಲಿ ಯಾವ ವಿಶೇಷ ಪ್ರತಿಕ್ರಿಯೆಯನ್ನೂ ಉಂಟುಮಾಡದೆ ಹೊಂದಿಕೊಂಡು ತಮ್ಮ ಕೆಲಸವನ್ನು ಜರುಗಿಸುತ್ತವೆ. ಇದೇ ರೀತಿ ರೋಗದಿಂದ ಅಕ್ರಮಕ್ರಿಯೆಗೊಂಡಿರುವ ಇತರ ಹೃದಯ ಕವಾಟಗಳನ್ನು ಮುಖ್ಯವಾಗಿ ತ್ರಿದಳ ಮತ್ತು ದ್ವಿದಳ ಕವಾಟಗಳನ್ನು ಕೃತಕಕವಾಟಗಳಿಂದ ಪಲ್ಲಟಿಸಲಾಗಿದೆ. ಕೆಲವು ಸಂದರ್ಭಗಳಲ್ಲಿ ಈ ಮೂರು ಕವಾಟಗಳನ್ನೂ ಒಂದೇ ಹೃದಯದಲ್ಲಿ ಕೃತಕವಾಗಿ ಅಳವಡಿಸಲಾಗಿದೆ. ಕೃತಕ ಕವಾಟ ಸ್ಟಾರ್‍ಕವಾಟವಾಗಿದ್ದರೆ ಹೃದಯದಿಂದ ರಕ್ತ ರಭಸದಿಂದ ಹೊರದಬ್ಬಲ್ಪಟ್ಟಾಗ ಗೋಲಿಯೊಡನೆ ಪದೇ ಪದೇ ತಿಕ್ಕಾಟವಾಗಿ ರಕ್ತಕಣಗಳು ಅತಿಯಾಗಿ ನಾಶಹೊಂದಬಹುದು. ಈ ಕಾರಣದಿಂದ ರಕ್ತಹೀನತೆಯೂ ಉಂಟಾಗಬಹುದು. ಜೊತೆಗೆ ಗೋಲಿಯ ಮೇಲೆ ರಕ್ತ ಹೆಪ್ಪುಗಟ್ಟಿಕೊಳ್ಳಬಹುದಾದ್ದರಿಂದ ಆ ಹೆಪ್ಪು ಆ ಮೇಲೆ ವಿಷಾಣುಗಳಿಂದ ಆವೃತವಾಗಿ ಹೃದಯದ ಒಳಪೊರೆಗೆ ಸೋಂಕು ತಗಲಿ ಊತವುಂಟಾಗಿ ಪ್ರಾಣಾಂತಕ ಆಗಬಹುದು. ಸ್ಟಾರ್ ಕವಾಟಗಳನ್ನು ಅಳವಡಿಸಿದ ಮೇಲೆ ಅವು 1 ವರ್ಷಕಾಲ ಕೆಲಸ ಮಾಡಿರುವುದನ್ನು ಅವನ್ನು ಅಳವಡಿಸಿದ 70% ರಷ್ಟು ವ್ಯಕ್ತಿಗಳಲ್ಲಿ ನೋಡಲಾಗಿದೆ. ಕೆಲವಂತೂ 5 ವರ್ಷಗಳ ಮೇಲೂ ಕ್ರಿಯಾಶಕ್ತಿಗುಂದದೆ ಕೆಲಸಮಾಡುತ್ತಿರುವುದು ತಿಳಿದುಬಂದಿದೆ. ಎಷ್ಟಾದರೂ ಶೈತ್ಯಾಧಿಕ್ಯದಿಂದ ನಿರ್ಜಲೀಕರಿಸಿ ಸಂಗ್ರಹಿಸಿಟ್ಟ ಪ್ರಾಣಿಹೃದಯದ ಕವಾಟಗಳನ್ನು ಅಳವಡಿಸುವುದು ಉತ್ತಮ. ಈಚೆಗೆ ಷೂ ಮೇಕರ್ ಮುಂತಾದವರು ಸಿಲಿಕಾನ್ ಮತ್ತು ರಬ್ಬರನ್ನು ಉಪಯೋಗಿಸಿ ಒಂದೇ ಚೂರಿನಲ್ಲಿ  ಕೃತಕ ಕವಾಟವನ್ನು ತಯಾರಿಸುತ್ತಾರೆ. ಇವು ಪೂರ್ಣವಾಗಿ ತೆರೆದಿದ್ದಾಗ ದುಂಡು ರಂಧ್ರದಂತೆಯೂ ಮುಚ್ಚಿಕೊಂಡಾಗ ಅ ಅಥವಾ S ಆಕಾರವಾಗಿ ಇರುವಂತೆಯೂ ತಯಾರುಮಾಡಲ್ಪಟ್ಟಿವೆ. ರಕ್ತ ಒಳಬರುವ ಕವಾಟಗಳಲ್ಲಿ ಅ ರೀತಿ ಕವಾಟಗಳನ್ನೂ ಹೊರಬರುವಲ್ಲಿ  S ರೀತಿಯ ಕವಾಟಗಳನ್ನೂ ಅಳವಡಿಸುತ್ತಾರೆ. ಇವನ್ನು ಉಪಯೋಗಿಸಿದಾಗ ರಕ್ತಕಣಗಳು ಉಜ್ಜುವಿಕೆಯಿಂದ ನಾಶಹೊಂದುವುದಾಗಲಿ ರಕ್ತ ಹೆಪ್ಪುಗಟ್ಟುವುದಾಗಲಿ ಕಾಣಬರುವುದಿಲ್ಲ.

	4. ಕೃತಕ ಹೃದಯ : ಹೃದಯ ಮಿಡಿದು ರಕ್ತವನ್ನು ಹೆಚ್ಚು ಒತ್ತಡದಿಂದ ಹೊರನೂಕುವ ವಿಧಾನವನ್ನು ಪೂರ್ಣವಾಗಿ ಸಾಧಿಸುವುದಕ್ಕೆ ಸಾಧ್ಯವಾಗಿಲ್ಲ. ಎಡಹೃತ್ಕುಕ್ಷಿಯ ರಕ್ತವನ್ನು ಹೆಚ್ಚು ಒತ್ತಡದಿಂದ ಆಯೋರ್ಟಕ್ಕೆ ವರ್ಗಾಯಿಸುವ ಕ್ರಿಯೆಯನ್ನು ಮಾತ್ರ ಕೃತಕಹೃದಯದಿಂದ ಸಾಧಿಸಲಾಗಿದೆ. ಹೃದಯದ ಕವಾಟಗಳು ಅತಿಯಾಗಿ ವ್ಯಾಧಿಗ್ರಸ್ತವಾಗಿ ನಿಷ್ಕ್ರಿಯೆಗೊಂಡಾಗ ಅಥವಾ ಹೃದಯದ ಸ್ನಾಯು ವ್ಯಾಧಿಯಿಂದ ಭಾಗಶಃ ಶಿಥಿಲಗೊಂಡಾಗ ಕೃತಕಹೃದಯ-ಶ್ವಾಸಕೋಶ ಯಂತ್ರದ ಹೃದಯ ಭಾಗವನ್ನು ಮಾತ್ರ ಉಪಯೋಗಿಸಿಕೊಂಡು ಹೆಚ್ಚು ಕಾಲ ಹೃದ್ರೋಗಿಗಳ ರಕ್ತಪರಿಚಲನೆಯನ್ನು ದೇಹದ ಹೊರಗಡೆಯಿಂದಲೇ ಕ್ರಮಗೊಳಿಸಬಹುದಾಗಿದೆ. ದೇಹದ ಒಳಗೇ ಅಳವಡಿಸಬಹುದಾದಂಥ ಕೃತಕ ಹೃದಯ, ಒಂದರ ಪಕ್ಕದಲ್ಲಿ ಒಂದು ಇರುವ, ಎರಡು ಸಂಕುಚಿತವಾಗಬಲ್ಲ ಕೋಶಗಳು. ಇವೆರಡನ್ನೂ ಸುಮಾರಾಗಿ ಗಡುಸಾದ ಇನ್ನೊಂದು ಕೋಶದೊಳಗಿಟ್ಟು ಒಳಗಿನ ಕೋಶಗಳನ್ನೂ ಹೊರಕೋಶವನ್ನೂ ಒಂದು ದ್ರವದಿಂದ ಬೇರ್ಪಡಿಸಿರುತ್ತಾರೆ. ಈ ದ್ರವದ ಒತ್ತಡವನ್ನು ಯಾಂತ್ರಿಕವಾಗಿ ಮಾರ್ಪಾಡು ಮಾಡಿ ಒಳಗಿನ ಕೋಶಗಳಲ್ಲಿ ಒಂದು ಸಂಕುಚಿತವಾದಾಗ ಇನ್ನೊಂದು ಹಿಗ್ಗುವಂತೆ ಏರ್ಪಾಡು ಮಾಡಿರುತ್ತಾರೆ. ಈ ಕ್ರಮಕ್ಕೆ ಬೇಕಾದ ಒತ್ತಡದ ಏರುವಿಕೆ ಇಳಿಯುವಿಕೆಗಳನ್ನು ಒಂದು ವಿದ್ಯುತ್ ಮೋಟಾರಿನಿಂದ ನಡೆಸಲ್ಪಡುವ ಪಂಪಿನಿಂದ ಸಾಧಿಸಲಾಗಿದೆ. ಮೋಟಾರನ್ನೂ ಪಂಪನ್ನೂ ಎದೆಯಲ್ಲಿ ಸ್ಥಾಪಿಸಲು ಸ್ಥಳವಿಲ್ಲದೆ ಅವನ್ನು ಹೊಟ್ಟೆಯೊಳಗಿಟ್ಟು ಒಂದು ದೊಡ್ಡ ನಾಳದಿಂದ ಎದೆಯಲ್ಲಿರುವ ಕೃತಕ ಹೃದಯಕ್ಕೆ ಸಂಪರ್ಕ ಉಂಟುಮಾಡಿರುತ್ತಾರೆ. ಮೋಟಾರನ್ನು ನಡೆಸಬೇಕಾದ ವಿದ್ಯುಚ್ಛಕ್ತಿಯನ್ನು ಒದಗಿಸುವುದು ಕಷ್ಟ. ದೇಹದ ಬೇರೆ ಸ್ನಾಯುಗಳಿಂದ ಈ ಶಕ್ತಿಯನ್ನು ಪಡೆಯುವುದಕ್ಕೆ ಸಾಧ್ಯವಿಲ್ಲ. ದೇಹದ ಬೇರೆಯಾವ ಸ್ನಾಯುವಿಗೂ ಹೃದಯದಂತೆ ನಿರಂತರ ಚಟುವಟಿಕೆಯನ್ನು ತಡೆದುಕೊಳ್ಳಲು ಸಾಧ್ಯವಿಲ್ಲ. ದೇಹದ ಹೊರಗೆ ಅಥವಾ ಒಳಗೆ ವಿದ್ಯುತ್ ಕೋಶಗಳನ್ನಿಟ್ಟು ಶಕ್ತಿಯನ್ನು ಪೂರೈಸುವುದೂ ಅಷ್ಟು ಅನುಕೂಲಕರವಾಗಿರುವುದಿಲ್ಲ. ಎಚ್ಚರಿಕೆಯಿಂದ ಪದೇಪದೇ ವಿದ್ಯುತ್‍ಕೋಶಗಳನ್ನು ಬದಲಿಸುತ್ತಲೇ ಇರಬೇಕು. ಪದೇಪದೇ ಬದಲಿಸದೇ ಇರಬಹುದಾದ, ಬಹುಕಾಲಿಕವಾಗಿ ಬಾಳಿಕೆಬರುವ ವಿದ್ಯುತ್‍ಕೋಶಗಳು ದೊಡ್ಡದಾಗಿದ್ದು ದೇಹದ ಒಳಗೆ ಸೇರಿಸಲು ಅನುಕೂಲವಾಗಿರುವುದಿಲ್ಲ. ದೇಹದ ಇತರ ಸ್ನಾಯುಗಳ ಚಲನೆಯಿಂದ ಒಳಗೆ ಸೇರಿಸಿರುವ ವಿದ್ಯುತ್‍ಕೋಶಗಳ ಶಕ್ತಿಯನ್ನು ಭಾಗಶಃ ವರ್ಧಿಸುತ್ತ ಇರಬಹುದಾದರೂ ಅನಾನುಕೂಲತೆ ನಿವಾರಣೆ ಆದ ಹಾಗೆ ಆಗಲಿಲ್ಲ. ಅದಕ್ಕೆ ಹೊರಗಡೆಯಿಂದಲೇ ಹೇಗಾದರೂ ಒಳಗಿನ ಮೋಟಾರಿಗೆ ವಿದ್ಯುತ್‍ಪೂರೈಕೆ ಮಾಡುವ ಏರ್ಪಾಡನ್ನು ಯೋಚಿಸಲಾಗಿದೆ. ಇದನ್ನು ಹೃದಯದ ಕೃತಕ ನರ ಅಳವಡಿಕೆಯಲ್ಲಿ ಕಾರ್ಯಶೀಲವಾಗಿ ಮಾಡಿದ್ದಾರೆ. ಕೆಲವು ಸಂದರ್ಭಗಳಲ್ಲಿ ಕವಾಟಗಳೇ ಇಲ್ಲದ ಹೃದಯವನ್ನು ಅಳವಡಿಸಲಾಗಿದೆ. ಇವು ಬೆರಳಿನಾಕಾರದ ಪಂಪುಗಳಂತೆ ಇದ್ದು ಒಂದು ತುದಿಯಿಂದ ಇನ್ನೊಂದು ತುದಿಯವರೆಗೆ ಕ್ರಮವಾಗಿ ಸಂಕುಚಿತವಾಗುವಂತೆ ಇರುತ್ತವೆ. ಇದರಿಂದ ರಕ್ತಪರಿಚಲನೆ ಏಕಮಾರ್ಗಿಕವಾಗಿಯೇ (ಕವಾಟಗಳಿಲ್ಲದಿದ್ದರೂ) ಸಾಗುವಂತಿರುತ್ತದೆ. ಕೃತಕ ಹೃದಯ ವಾಸ್ತವವಾಗಿ ಕೃತಕ ಎಡಹೃತ್ಕುಕ್ಷಿ ಮಾತ್ರವಾಗಿ ತಾತ್ಕಾಲಿಕವಾಗಿ ಹೃದಯ ಕವಾಟಗಳನ್ನು ಕೃತಕವಾಗಿ ಅಳವಡಿಸಿದಾಗ ಅಥವಾ ಹೃದಯಸ್ನಾಯು ಭಾಗಶಃ ಶಿಥಿಲಗೊಂಡಾಗ ಉಪಯೋಗಿಸಲು ಅನುಕೂಲವಾಗಿದೆ. ಒಟ್ಟಿನಲ್ಲಿ ಹೃದಯದಲ್ಲಿ ಮೂರು ಕವಾಟಗಳು ಮತ್ತು ಎಡಹೃತ್ಕುಕ್ಷಿಗಳನ್ನು ಕೃತಕವಾಗಿ ಅಳವಡಿಸಬಹುದೆಂದಾಯಿತು. ಸದ್ಯದ ಸ್ಥಿತಿಯಲ್ಲಿ ಕೃತಕವಾಗಿ ಇಷ್ಟು ಮಾಡಲು ಮಾತ್ರ ಸಾಧ್ಯವಾಗಿದೆ.

	5.ಕೃತಕ ನರಗಳು : ಬೆನ್ನುಮೂಳೆ ರೋಗದಿಂದ ಅಥವಾ ಆಘಾತದಿಂದ ಮುರಿದು ಹೋದಾಗ ಅದರೊಳಗಿರುವ ನರಮಂಡಲ ಬಹುವಾಗಿ ಹಿಸುಕಲ್ಪಟ್ಟು ಅಥವಾ ಕತ್ತರಿಸಿಯೇ ಹೋಗಿ ನಿಷ್ಕ್ರಿಯವಾಗುತ್ತದೆ. ಹೀಗಾದಾಗ ಸಾಮಾನ್ಯವಾಗಿ ಕಾಲುಗಳ ಸ್ವಾಧೀನ ತಪ್ಪುವುದೇ ಅಲ್ಲದೆ ಮೂತ್ರಕೋಶದ ಸ್ವಾಧೀನವೂ ತಪ್ಪುತ್ತದೆ. ಮೂತ್ರಕೋಶ ಯಥಾವತ್ತಾಗಿ ಕೆಲಸ ಮಾಡಬೇಕಾದರೆ, ಅದಕ್ಕೆ ಕ್ರಿಯಾವಾಹಿ ನರಗಳು ನರಮಂಡಲದಿಂದ ಒದಗಿಸುತ್ತಿದ್ದ ಪ್ರಚೋದನೆಯಂತೆಯೇ ಕೃತಕ ಪ್ರಚೋದನೆ ದೊರೆಯುವಂತೆ ಮಾಡಬೇಕು. ದೇಹದ ಹೊರಗಡೆ ಇರುವ ವಿದ್ಯುತ್‍ಕೋಶಗಳಿಂದ ಒದಗುವ ವಿದ್ಯುಚ್ಛಕ್ತಿಯನ್ನು ತಂತಿಗಳ ಮೂಲಕ ಮೂತ್ರಕೋಶದಲ್ಲಿ ಒಂದು ನಿರ್ದಿಷ್ಟ ಕ್ರಮದಲ್ಲಿ ಪ್ರವಹಿಸುವಂತೆ ಮಾಡಿದರೆ ಅಂಥ ಕೃತಕ ಪ್ರಚೋದನೆಯಿಂದ ಅದು ಸಂಕುಚಿತವಾಗುವಂತೆ ಮಾಡಬಹುದು. ವಿದ್ಯುಚ್ಛಕ್ತಿಯನ್ನು ಒಯ್ಯುವ ತಂತಿಗಳನ್ನು ಹೊಟ್ಟೆಯಲ್ಲಿ ರಂಧ್ರ ಮಾಡಿ ನುಗ್ಗಿಸಿ ಮೂತ್ರಕೋಶದ ಮೇಲೆ ಸರಿಯಾದ ಸ್ಥಳದಲ್ಲಿ ಕೂರಿಸಿ ಸೇರಿಸಿ ಹೊಲೆಯಬೇಕಾಗುತ್ತದೆ. ತಂತಿಗಳ ಈ ಭಾಗಗಳಾದರೂ ಬೆಳ್ಳಿ ತಂತಿಗಳಾಗಿರಬೇಕು. ಹೊಸ ವಸ್ತುವನ್ನು ದೇಹದೊಳಗೆ ಅಳವಡಿಸಿ, ನಿರ್ದಿಷ್ಟ ಸ್ಥಾನದಲ್ಲಿ ಪ್ರತಿಷ್ಠಿಸಬೇಕಾದರೆ ಏನೇನು ಎಚ್ಚರಿಕೆ ತೆಗೆದುಕೊಳ್ಳಬೇಕೋ ಅಷ್ಟು ಎಚ್ಚರಿಕೆಯನ್ನು ಇಲ್ಲೂ ತೆಗೆದುಕೊಳ್ಳಬೇಕು. ಮೂತ್ರಕೋಶ ಮೂತ್ರದಿಂದ ಅತಿಯಾಗಿ ಹಿಗ್ಗಲ್ಪಟ್ಟು, ತಡೆ ಮಿತಿಮೀರಿ ಮೂತ್ರತೊಟ್ಟು ತೊಟ್ಟಾಗಿ ಸ್ರವಿಸುತ್ತಲೇ ಇರಬಹುದಾದ ಸಂದರ್ಭದಲ್ಲಿಯೂ ಇದೇ ರೀತಿಯಲ್ಲಿ, ಮೂತ್ರಕೋಶದ ಬಾಯಲ್ಲಿದ್ದು ನಲ್ಲಿಯಂತೆ ವರ್ತಿಸುವ ಉಂಗುರಸ್ನಾಯುವನ್ನೂ ಕೃತಕ ಪ್ರಚೋದನೆಯಿಂದ ಸಂಕುಚಿತವಾಗಿರುವಂತೆಯೇ ಇಟ್ಟುಕೊಂಡು, ಬೇಕಾದಾಗ ಅದು ಸಡಿಲ ಬಿಡುವಂತೆ ಮಾಡಿಕೊಳ್ಳಬಹುದು. ಮೂತ್ರ ವಿಸರ್ಜನೆಯನ್ನು ಕೃತಕವಾಗಿ ಈ ವಿಧಾನಗಳಿಂದ ಸಕ್ರಮಿಸಿಕೊಳ್ಳಬಹುದಾಗಿದೆ. ಇಂಥ ಸಂದರ್ಭಗಳಲ್ಲಿ  ಹೀಗೆಯೇ ನಿಷ್ರ್ಕಿಯೆಗೊಳ್ಳುವ ಮಲಕೋಶದ ಉಂಗುರಸ್ನಾಯುವನ್ನೂ ಕೃತಕವಾದ ನರಪ್ರಚೋದನೆ ಕ್ರಮದಿಂದ ಬೇಕಾದಾಗ ಸಡಿಲಗೊಳ್ಳುವಂತೆ ಏರ್ಪಾಡು ಮಾಡಿ ಕೊಳ್ಳಬಹುದು. ಈ ರೀತಿ ಹೊರಗಿನಿಂದ ರಂಧ್ರಮಾಡಿ ತಂತಿಗಳನ್ನು ಒಳಹೊಗಿಸಿ ಕೃತಕನರಗಳನ್ನು ಒದಗಿಸುವ ಬದಲು ಒಂದು ತಂತಿಯ ಸುರುಳಿಯನ್ನು ದೇಹದ ಒಳಗೆ ಇಟ್ಟು ಅದರ ಎರಡು ತುದಿಗಳನ್ನೂ ಈ ಅಂಗಗಳಿಗೆ ಬೇರೆಬೇರೆಯಾಗಿ ಸೇರಿಸಿ ಹೊಲಿದು ಅದೇ ನರದಲ್ಲಿ ಹೊಲಿದು ಹೊರಗಡೆ ಇನ್ನೊಂದು ತಂತಿ ಸುರುಳಿಯನ್ನು ಇಟ್ಟು ಈ ಹೊರಗಿನ ಸುರುಳಿಯನ್ನು ಹೊರಗೇ ಇರುವ ವಿದ್ಯುತ್ ಕೋಶಕ್ಕೆ ಒಂದು ಸ್ವಿಚ್ಚನ್ನಿಟ್ಟು ಸೇರಿಸಿರಬಹುದು. ಹೊರಗಿನ ಸುರುಳಿಯಲ್ಲಿ ವಿದ್ಯುತ್ಪ್ರವಾಹವನ್ನುಂಟುಮಾಡಿದಾಗ ಒಳಗಿನ ತಂತಿ ಸುರುಳಿಯಲ್ಲಿ ಕ್ಷಣಿಕವಾಗಿ ವಿದ್ಯುತ್ತು ಪ್ರೇರಣೆ ಉಂಟಾಗುತ್ತದೆ. ಮತ್ತು ಅದು ಅಂಗದಲ್ಲಿ ಪ್ರವಹಿಸಿ, ಅದನ್ನು ಪ್ರಚೋದಿಸಿ ಅದು ಸಂಕುಚಿಸುವಂತೆ ಮಾಡುತ್ತದೆ. ಇದರಿಂದ ಮಲಮೂತ್ರ ವಿಸರ್ಜನೆಯನ್ನು ಕೃತಕವಾಗಿ ಹತೋಟಿಯಲ್ಲಿಟ್ಟುಕೊಂಡಿರಬಹುದಾಗಿದೆ. ಆದರೆ ಸದ್ಯದಲ್ಲಿ ಮಲಮೂತ್ರ ಕೋಶಗಳ ಸ್ನಾಯುಗಳನ್ನು ಕೃತಕವಾಗಿ ಹೊರಗಡೆ ತಂತಿಗಳಿಂದಲೇ ಹತೋಟಿಯಲ್ಲಿಟ್ಟುಕೊಳ್ಳುವುದು ವಾಡಿಕೆ.

	ಹೃದಯಕ್ಕೆ ಕೃತಕನರ ಪೂರೈಕೆ : ಬಲಹೃತ್ಕರ್ಣದ ಒಂದು ಭಾಗ ನಿಯಮಿತವಾಗಿ ಸ್ವಪ್ರಚೋದನೆಗೊಳ್ಳುವುದರಿಂದ ಮತ್ತು ಆ ಪ್ರಚೋದನೆ ಹೃದಯದ ಮಿಕ್ಕ ಭಾಗಗಳಿಗೆ ನಿರ್ದಿಷ್ಟ ಮಾರ್ಗದಲ್ಲಿ ಒಯ್ಯಲ್ಪಡುವುದರಿಂದ ಹೃದಯ ಸಹಜವಾಗಿ ನಿಯಮಿತವಾಗಿ ಮಿಡಿಯುವುದು. ಹೃದಯದ ಈ ವೇಗನಿಷ್ಕರ್ಷಕಸ್ಥಾನ ಮತ್ತು ಪ್ರಚೋದನಾವಾಹಕ ಮಾರ್ಗ ರೋಗದಿಂದಲೋ ಆಘಾತದಿಂದಲೋ ತಾತ್ಕಾಲಿಕವಾಗಿ ಅಥವಾ ಕಾಯಂ ಆಗಿ ನಿಷ್ಕ್ರಿಯಗೊಂಡಾಗ ಹೃದಯದ ಮಿಡಿತದಲ್ಲಿ ಅಕ್ರಮ ತಲೆದೋರುವುದು. ಹೃದಯಮಿಡಿತ ಅತಿ ಕಡಿಮೆ ಆದರೂ ಸಾಮಾನ್ಯವಾಗಿ ರಕ್ತದ ಒತ್ತಡ ಕಡಿಮೆ ಆಗಿಬಿಡುತ್ತದೆ. ರಕ್ತದ ಒತ್ತಡ ನೈಜಪ್ರಮಾಣದಲ್ಲಿದ್ದು ಬದುಕು ನಿರ್ವಿಘ್ನವಾಗಿ ಮುಂದುವರಿಯಬೇಕಾದರೆ ಹೃದಯದ ಈ ಅಕ್ರಮವನ್ನು ಹೋಗಲಾಡಿಸಬೇಕು. ಇದನ್ನು ಕೃತಕ ವೇಗನಿಷ್ಕರ್ಷಕಸ್ಥಾನವನ್ನು ಅಳವಡಿಸಿ ಸಾಧಿಸಬಹುದು. ವೇಗನಿಷ್ಕರ್ಷಕಸ್ಥಾನ ಹೃತ್ಕರ್ಣಗಳನ್ನು ಪ್ರಚೋದಿಸಿ ಪುನಃ ತಂತಿಗಳಿಂದ ಹೃತ್ಕುಕ್ಷಿಗಳನ್ನು ಪ್ರಚೋದಿಸುವಂತೆ ಇರುತ್ತದೆ. ಕೃತಕ ವೇಗನಿಷ್ಕರ್ಷಕ ದೇಹದ ಹೊರಗಿರುತ್ತದೆ. ಅದು ಒಂದು ವಿದ್ಯುತ್ಕೋಶದಿಂದ ವಿದ್ಯುತ್ತನ್ನು, ಗಡಿಯಾರ ಸಾಧನದ ನೆರವಿನಿಂದ ನಿಯಮಿತವಾಗಿ, ತಂತಿಗಳ ಮೂಲಕ ಒದಗಿಸುತ್ತದೆ. ಮಲಮೂತ್ರಕೋಶಗಳ ಕೃತಕ ಹತೋಟಿಯಲ್ಲಿಯಂತೆಯೇ ಇಲ್ಲೂ ತಂತಿಗಳು ಒಳಹೋಗುವ ರಂಧ್ರಗಳೆಡೆಯಲ್ಲಿ ಕೀತುಕೊಳ್ಳಬಹುದು. ಹೊರಗಿನ ವಿದ್ಯುತ್ಕೋಶಗಳು ದುರ್ಬಲಗೊಳ್ಳುವುದಕ್ಕೆ ಮೊದಲೇ ಎಚ್ಚರಿಕೆಯಿಂದ ಅದನ್ನು ಬದಲಾಯಿಸುತ್ತಿರಬೇಕು. ಆದ್ದರಿಂದ ಬಹುಕಾಲ ಬಾಳಿಕೆ ಬರುವ ವಿದ್ಯುತ್ಕೋಶಗಳನ್ನೂ ಗಡಿಯಾರ ಸಾಧನಗಳನ್ನೂ ದೇಹದ ಒಳಗೇ ಅಳವಡಿಸುವ ಏರ್ಪಾಡು ನಡೆದಿದೆ. ಬಹುಕಾಲಿಕವಾಗಿಯಾದರೂ ವಿದ್ಯುತ್ಕೋಶವನ್ನು ಬದಲಿಸಬೇಕಾದ ಅವಶ್ಯಕತೆ ಇರುವುದರಿಂದ ಪ್ರತಿಸಾರಿಯೂ ಶಸ್ತ್ರಕ್ರಿಯೆಯನ್ನು ಮಾಡಿ ಬದಲಿಸುತ್ತಿರಬೇಕಾಗಿದೆ. ಆದ್ದರಿಂದ ಇಲ್ಲೂ ಹೊರಗಡೆ ಇರುವ ತಂತಿ ಸುರುಳಿಯಿಂದ ಒಳಗಡೆ ತಂತಿ ಸುರುಳಿಯಲ್ಲಿ ವಿದ್ಯುತ್‍ಪ್ರೇರಣೆ ಉಂಟಾಗುವ ವಿಧಾನವನ್ನು ಬಳಸಿಕೊಂಡು ಕೃತಕವೇಗನಿಷ್ಕರ್ಷಕವನ್ನು ದೇಹದ ಒಳಗೆ ಅಳವಡಿಸಿದ್ದಾರೆ. ಹೊರಗಡೆ ತಂತಿ ಸುರುಳಿಯಲ್ಲಿ ಗಡಿಯಾರ ಸಾಧನ ಮತ್ತು ಹೊರಗಡೆಯ ವಿದ್ಯುತ್ಕೋಶಗಳಿಂದ ನಿಯಮಿತವಾಗಿ ವಿದ್ಯುತ್ ಪ್ರವಾಹವಾದಾಗಲೆಲ್ಲ ಅದೇ ನಿಯಮದಂತೆ ಕ್ಷಣಿಕವಾಗಿ ಒಳಸುರುಳಿಯಲ್ಲಿ ವಿದ್ಯುತ್ ಪ್ರವಾಹವುಂಟಾಗಿ ಹೃದಯಮಿಡಿತವೇರ್ಪಡುತ್ತದೆ. ಇದು ಕಾಯಂ ಆಗಿ ಕೃತಕವೇಗ ನಿಷ್ಕರ್ಷಕವನ್ನು ಅಳವಡಿಸಬೇಕಾಗುವಾಗ ಅನುಸರಿಸುವುದಕ್ಕೆ ಯೋಗ್ಯವಾದ ಮಾರ್ಗ. ಜೊತೆಗೆ ವಾಸ್ತವವಾಗಿ ಇದರ ಕ್ರಿಯೆ ಹೊರಗಡೆಯೇ ಇರುವ ವಿದ್ಯುತ್ಕೋಶದಿಂದಲೇ ಜರಗುವುದರಿಂದ ವಿಷಾಣುಗಳಿಂದ ಕೀತುಕೊಳ್ಳುವ, ವಿದ್ಯುತ್ಕೋಶದ ಆಯುಸ್ಸು ಮುಗಿದುಹೋಗುವಂತಿದೆಯೇನೋ ಎನ್ನುವ ಆತಂಕದ, ತಂತಿಗಳು ಮುರಿದುಹೋಗುವ, ಇತ್ಯಾದಿ ಯಾವ ತೊಂದರೆಗಳೂ ಇರುವುದಿಲ್ಲವೆಂಬುದನ್ನು ಗಮನಿಸಬಹುದು. ದೇಹದ ಒಳಗಿರುವ ತಂತಿ ಸುರುಳಿಯಲ್ಲಿ ವಿದ್ಯುತ್ತಿನ ಉತ್ಪತ್ತಿಯನ್ನು ದೇಹದ ಇತರ ಸ್ನಾಯುಗಳ ಕ್ರಿಯೆಯಿಂದಲೇ ಉಂಟುಮಾಡಬಹುದಾದ ಸಾಧ್ಯತೆಯನ್ನೂ ಪರಿಶೀಲಿಸಲಾಗುತ್ತದೆ. ತಾತ್ಕಾಲಿಕವಾಗಿ ಹೃದಯದ ಮಿಡಿತದ ವೇಗವನ್ನು ನಿಷ್ಕರ್ಷಿಸುವುದಕ್ಕೆ ಹೊರಗಡೆಯಿಂದ ತಂತಿಯನ್ನು ಒಳಹೊಗಿಸಿ ಅದನ್ನು ಹೃದಯಕ್ಕೆ ಸಂಪರ್ಕಿಸುವ ಸಾಧನವನ್ನೆ ಉಪಯೋಗಿಸುತ್ತಾರೆ.

	ಕೃತಕ ಸೈನೋ ಅಯೋರ್ಟಿಕ್ ನರ : ಕೊನೆಯದಾಗಿ, ನರದಂತೆಯೇ ಸ್ವಾಭಾವಿಕ ರೀತಿಯ ಪ್ರಚೋದನೆಯನ್ನು ಉಂಟುಮಾಡಿ ಕಾರ್ಯಸಿದ್ಧಿಯನ್ನು ಸಾಧಿಸುವ ಈ ವಿಧಾನ ರಕ್ತದ ಒತ್ತಡವನ್ನು ಕೃತಕವಾಗಿ ನಿಯಂತ್ರಿಸಲು ಉಪಯೋಗಕಾರಿಯಾದೀತೇ ಎಂದು ಸಹ ಪರಿಶೀಲಿಸಲಾಗುತ್ತದೆ. ಸ್ವಾಭಾವಿಕವಾಗಿ ರಕ್ತದ ಒತ್ತಡ ಸೈನೋಅಯೋರ್ಟಿಕ್ ನರಗಳ ನಿಯಮಿತ ಪ್ರಚೋದನೆಯಿಂದ ನಿಯಂತ್ರಿಸಲ್ಪಡುತ್ತದೆ. ಸ್ವಾಭಾವಿಕ ನಿಯಂತ್ರಣಕ್ಕೆ ಚ್ಯುತಿ ಉಂಟಾದಾಗ ಅದರ ಬದಲಾಗಿ ಸೈನೋಅಯೋರ್ಟಿಕ್ ನರಗಳಂತೆಯೇ ನಿಯಮಿತವಾಗಿ ಪ್ರಚೋದನೆಯನ್ನು ಉಂಟುಮಾಡುವ ವಿದ್ಯುತ್ ಸಾಧನವನ್ನು ತಯಾರು ಮಾಡಲಾಗುತ್ತದೆ.

	6. ಇತರ ನಿರ್ಜೀವ ವಸ್ತುಗಳ ಅಳವಡಿಕೆ : ಇದೇ ರೀತಿ ಶಬ್ದಜನಕ ಕೋಶ, ಹೊರಕಿವಿ ಪೊರೆ, ಕಣ್ಣಿನ ಮಸೂರ-ಇವನ್ನೂ ಕೃತಕವಾಗಿ ಅಳವಡಿಸಲಾಗಿದೆ. ಕಿವಿಪೊರೆ ಬಹುವಾಗಿ ಘಾತದಿಂದಲೊ ರೋಗದಿಂದಲೊ ಹರಿದುಹೋಗಿ ಕಿವಿಗೆ ಬಿದ್ದ ಶಬ್ದಗಳು ಒಳಕಿವಿಯ ಸ್ಪಂದನವನ್ನುಂಟುಮಾಡದೇ ಇರುವ ಸ್ಥಿತಿಯಲ್ಲಿ ಕೃತಕ  ಹೊರಕಿವಿ ಪೊರೆಯನ್ನು ಅಳವಡಿಸುವುದು ಪ್ರಯೋಜನಕಾರಿ. ಇದನ್ನು ನಿರ್ಜೀವ ವಸ್ತುಗಳಿಂದ ತಯಾರು ಮಾಡುತ್ತಾರೆ. ಇದೇ ರೀತಿ ನಡುಕಿವಿಯ ಮೂಳೆಗಳು ಅಥವಾ ಒಳಕಿವಿ ಪೊರೆಯ ಭಾಗ ನಿಷ್ಕ್ರಿಯಗೊಂಡು, ಕಿವಿಗೆ ಬಿದ್ದ ಶಬ್ದ ಕೇಳಿಸದಂತಿದ್ದರೆ, ಹೊರವಸ್ತುಗಳನ್ನು ಉಪಯೋಗಿಸಿ ಇವನ್ನು ಕೃತಕವಾಗಿ ಸೃಷ್ಟಿಸಿ ಕೇಳುವಿಕೆಯನ್ನು ಉತ್ತಮಪಡಿಸಲು ಪ್ರಯತ್ನ ನಡೆದಿದೆ. ಆದರೆ ಇವನ್ನು ಜೀವಂತನಾಟಿ ವಿಧಾನದಲ್ಲಿ ಹೆಚ್ಚು ಉಪಯುಕ್ತವಾಗುವಂತೆ ಮಾಡಿದ್ದಾರೆ. ಇದೇ ರೀತಿ ಏಡಿಗಂತಿ ಇರುವ ಶಬ್ದಜನಕ ಕೋಶವನ್ನು ಪೂರ್ಣವಾಗಿ ತೆಗೆದು ಹಾಕಿದ ಮೇಲೆ ಶವದಿಂದ ತೆಗೆದ (ಅಂದರೆ ನಿರ್ಜೀವವಾದ) ಇನ್ನೊಂದು ಶಬ್ದಜನಕ ಕೋಶವನ್ನು ಅಳವಡಿಸುವ ಪ್ರಯತ್ನ ನಡೆದಿದೆ. ಶವಗಳಿಂದ ಅಂಗಗಳನ್ನು ಪಡೆಯುವುದು ಬಲು ಜಟಿಲಕಾರ್ಯ. ಈ ಅಳವಡಿಕೆ ಬಲು ಕ್ಲಿಷ್ಟ. ಇಂಥ ಪ್ರಯತ್ನವನ್ನು 1969ರಲ್ಲಿ ಒಂದೇ ಸಾರಿ ಮಾಡಿರುವುದು ತಿಳಿದುಬಂದಿದೆ. ಅಳವಡಿಸಿದ ವ್ಯಕ್ತಿಯಲ್ಲಿ ಕೃತಕ ಶಬ್ದಜನಕ ಕೋಶ 5 ತಿಂಗಳು ಕಾರ್ಯವೆಸಗಿ ಅವನು ತಕ್ಕಮಟ್ಟಿಗೆ ಮಾತಾಡಬಲ್ಲವನಾಗಿದ್ದನೆಂದೂ 5 ತಿಂಗಳ ಮೇಲೆ ಅವನಲ್ಲಿದ್ದ ಏಡಿಗಂತಿ ರೋಗ ಮರುಕಳಿಸಿ ಅವನು ಮರಣ ಹೊಂದಿದನೆಂದೂ ತಿಳಿದು ಬಂದಿದೆ. ಕಣ್ಣುಪೊರೆ ಬಂದಾಗ ಅಥವಾ ಇನ್ನಾವ ಕಾರಣದಿಂದಲಾದರೂ ಕಣ್ಣೊಳಗಿರುವ ಮಸೂರ ನಿರುಪಯುಕ್ತವಾಗಿ ದೃಷ್ಟಿನಾಶವಾಗಿದ್ದರೆ ಅಂಥ ಮಸೂರವನ್ನು ತೆಗೆದುಬಿಟ್ಟು ಅದರ ಸ್ಥಳದಲ್ಲಿ ಪ್ಲಾಸ್ಟಿಕ್ ಮಸೂರವನ್ನಿಟ್ಟು ದೃಷ್ಟಿ ಸರಿಹೋಗುವಂತೆ ಮಾಡುವ ವಾಡಿಕೆ ಸ್ವಲ್ಪ ಹಿಂದೆ ಇತ್ತು. ಆದರೆ ಇದರ ಉಪಯುಕ್ತತೆ ಬಹು ಕಡಿಮೆಯಾದ್ದರಿಂದ ಮತ್ತು ಇದರಿಂದ ತೊಂದರೆಯಾಗುವ ಸಂದರ್ಭವೇ ಜಾಸ್ತಿ ಆದ್ದರಿಂದ ಈಚೆಗೆ ಈ ಅಳವಡಿಕೆ ಅಷ್ಟಾಗಿ ನಡೆಯುತ್ತಿಲ್ಲ. 

	ದೇಹದ ಒಳಗಡೆ ಜೀವಂತ ವಸ್ತುಗಳ ಅಳವಡಿಕೆ ನಾಟ :  ದೇಹದ ಒಳಗೆ ಜೀವಂತ ಭಾಗಗಳನ್ನು ಕೃತಕವಾಗಿ ಅಳವಡಿಸುವುದು ನಾಟಿ ವಿಧಾನ. ದೇಹದ ಹೊರಗೆ ಜೀವಂತ ಭಾಗಗಳನ್ನು ಅಳವಡಿಸುವ ವಿಧಾನವನ್ನು, ಮೂಗುಕಿವಿಗಳು ಛಿದ್ರವಾಗಿದ್ದಾಗ ಅವನ್ನು ಪುನವ್ರ್ಯವಸ್ಥೆ ಮಾಡುವುದಕ್ಕೆ ಕೈಗೊಳ್ಳುತ್ತಾರೆ. ದೃಢತೆಗೆ ಮೃದ್ವಸ್ಥಿಯನ್ನೂ ಆಕಾರ ನಿರ್ಮಾಣಕ್ಕೆ ಚರ್ಮವನ್ನೂ ತೆಗೆದುಕೊಂಡು ನಾಟಿ ಹಾಕಬೇಕಾಗುತ್ತದೆ. ಹತ್ತಿರದ ಸ್ಥಳದಿಂದ ಅದೇ ಭಾಗದ ಚರ್ಮವನ್ನು  ತೆಗೆದು, ಬೇಕಾದ ಸ್ಥಳದಲ್ಲಿ ತಕ್ಕ ಸಿದ್ಧತೆ ಮಾಡಿ ಅದನ್ನು ನೆಟ್ಟು, ವಿಷಾಣುಗಳಿಂದ ಕೀತುಕೊಳ್ಳುವುದನ್ನು ತಡೆಗಟ್ಟಿದರೆ, ಈ ಚರ್ಮ ನಾಟಿ ಹಾಕಿದ ಸ್ಥಳದಲ್ಲಿ ಸ್ಥಿರವಾಗಿ ನಿಂತು, ಬೆಳೆದು ಸುತ್ತಲಿನ ಚರ್ಮಕ್ಕೆ ಸೇರಿಕೊಳ್ಳುತ್ತದೆ. ಇದೇ ರೀತಿ ನಿಷ್ಕ್ರಿಯಗೊಂಡ ಕಿವಿಯ ಹೊರ ಪೊರೆಯನ್ನೂ ನಾಟಿ ವಿಧಾನದಲ್ಲಿ ಪಲ್ಲಟಿಸಬಹುದು. ಸುಟ್ಟ ಗಾಯಗಳಲ್ಲಿ ಚರ್ಮ ಅಧಿಕವಾಗಿ ನಾಶಹೊಂದಿ, ಗುಣವಾದ ಮೇಲೆ ಅಸಹ್ಯವಾದ ಅಡಚಣೆಯನ್ನುಂಟುಮಾಡುವ ಗಾಯಕಲೆ ಆದಲ್ಲಿ, ಆ ಸ್ಥಳದಲ್ಲೂ ನಶಿಸಿದ ಭಾಗವನ್ನು ತೆಗೆದುಹಾಕಿ ಹೊಸ ಚರ್ಮವನ್ನು ನಾಟಿ ಹಾಕಬೇಕಾಗುತ್ತದೆ. ದೇಹದ ಒಳಗಡೆಯೂ ಇದೇ ರೀತಿ ನಶಿಸಿದ  ಜೀರ್ಣವಾದ ಒಂದು ಭಾಗಕ್ಕೆ ಬದಲು ಸ್ವಲ್ಪ ಹೆಚ್ಚೂಕಡಿಮೆ ಅದೇ ಲಕ್ಷಣವುಳ್ಳ ಬೇರೊಂದು ಭಾಗವನ್ನು ಅಳವಡಿಸಬಹುದಾಗಿದೆ. ಮೂತ್ರಕೋಶದ ಭಾಗವನ್ನು ಸಣ್ಣ ಕರುಳಿನ ಭಾಗದಿಂದಲೂ, ಅನ್ನನಾಳವನ್ನು ದೊಡ್ಡಕರುಳಿನ ಭಾಗದಿಂದಲೂ ಈ ರೀತಿ ಪಲ್ಲಟಿಸಿರುವುದು ಆಗಲೇ ಸಾಮಾನ್ಯವಿಷಯ. ಹೀಗಿದ್ದರೂ ಹಣೆಗೆ ಚರ್ಮವನ್ನು ನಾಟಿ ಹಾಕಬೇಕಾದಾಗ ತಲೆಯಿಂದ ಅಥವಾ ಹೊಟ್ಟೆಯಿಂದ ಚರ್ಮವನ್ನು ತೆಗೆದುಕೊಂಡು ನಾಟಿ ಹಾಕಬಾರದು. ಪಲ್ಲಟವಾದ ಅಂಗಭಾಗಗಳಿಗೆ ತಕ್ಕಷ್ಟು ರಕ್ತ ಪೂರೈಕೆಯಾಗುವುದೊಂದೇ ಇಲ್ಲಿ  ಗಣನೀಯವಾದ ಅಗತ್ಯತೆ. ನಿರ್ನಾಳ ಗ್ರಂಥಿಗಳ ನಾಟಿಯಂತೆಯೇ ಈ ನಾಟಿಗಳು ಜೀವಂತವಾಗಿದ್ದು ಕ್ರಿಯಾಗತವಾಗಿರಬೇಕಾದರೆ ಅವು ರಕ್ತ ಪೂರೈಕೆಗೆ ಸಹ ಗ್ರಾಹಕ ಭಾಗದ ಮೇಲೆ ಹೆಚ್ಚು ಅವಲಂಬಿಸದೆ ಇರುವಂಥ ನರಪ್ರಚೋದನೆ ಬೇಡವೇ ಆದ ರೀತಿಯವಾಗಿರಬೇಕು. ಈ ರೀತಿಯ ನಾಟಿ ಒಂದು ವ್ಯಕ್ತಿಯಲ್ಲಿ ಅಂಗದ ಅಥವಾ ಅಂಗಭಾಗದ ಸ್ಥಾನಪಲ್ಲಟ ಅಷ್ಟೆ. ಬೇರೆ ಪ್ರಾಣಿಗಳ ಜೀವಂತ ಅಂಗ ಅಥವಾ ಅಂಗಭಾಗಗಳನ್ನು ಹೀಗೆ ನಾಟಿ ಹಾಕಿ ಕಾರ್ಯಗತವಾಗುವಂತೆ ಮಾಡಲು ಆಗುವುದಿಲ್ಲ. ಬೇರೆ ಮನುಷ್ಯರ ಜೀವಂತ ನಾಟಿಗಳನ್ನು ಹಾಕಿದರೂ ಅವು ನೆಲೆಯಾಗಿನಿಂತುಕೊಳ್ಳುತ್ತವೆಂದು ನೆಚ್ಚಿಕೆ ಇಲ್ಲ. ಈ ಮೂರು ರೀತಿಯ ನಾಟಿಗಳನ್ನು ಅನುಕ್ರಮವಾಗಿ ಸ್ವಕೀಯ ನಾಟಿ (ಆಟೋ ಗ್ರಾಫ್ಟ್), ಅಂತರ್ಜಾತಿಯ ನಾಟಿ (ಹೆಟಿರೋ ಗ್ರಾಫ್ಟ್) ಮತ್ತು ಸ್ವಜಾತೀಯ ನಾಟಿ (ಹೋಮೋಗ್ರಾಫ್ಟ್) ಎಂದು ಕರೆಯುತ್ತಾರೆ. ಅಂತರ್ಜಾತಿಯ ನಾಟಿಗಳು ಯಾವಾಗಲೂ ಮತ್ತು ಸ್ವಜಾತಿಯ ನಾಟಿಗಳು ಸಾಮಾನ್ಯವಾಗಿಯೂ ನೆಲೆಗೊಳ್ಳದೆ ನಿಷ್ಫಲವಾಗಿ ವಿಸರ್ಜಿಸಲ್ಪಡುವವು. ಸ್ವಕೀಯ ನಾಟಿಗಳಂತೆ ಸ್ವಜಾತಿಯ ನಾಟಿಗಳು ರಕ್ತಪೂರೈಕೆಗೆ ಗ್ರಾಹಕ ದೇಹದ ಮೇಲೆ ಹೆಚ್ಚು ಅವಲಂಬಿಸದೆ, ನರಪ್ರಚೋದನೆ ಬೇಡವೇ ಆಗಿರುವಂತಾದರೆ, ಅವು ಮಾತ್ರ ಗ್ರಾಹಕ ದೇಹದಲ್ಲಿ ನೆಲೆನಿಂತುಕೊಳ್ಳುತ್ತವೆ. ಅವಳಿ ಜವಳಿಗಳಲ್ಲಿ ಒಬ್ಬರ ಅಂಗ ಇನ್ನೊಬ್ಬರಲ್ಲಿ ಸಾಮಾನ್ಯವಾಗಿ ವಿಷರ್ಜಿಸಲ್ಪಡದೆ ನೆಲೆನಿಂತುಕೊಳ್ಳುತ್ತದೆ. ಏಕೆಂದರೆ ಇಂಥ ನಾಟಿಯನ್ನು ಒಂದು ರೀತಿಯ ವಿಶೇಷವಾದ ಸ್ವಕೀಯ ನಾಟಿಯೆಂದೇ ಪರಿಗಣಿಸಬೇಕಾಗಿದೆ.  ಸ್ವಜಾತೀಯ ನಾಟಿಗಳು ಸಾಮಾನ್ಯವಾಗಿ ಗ್ರಾಹಕ ದೇಹದಲ್ಲಿ ನೆಲೆನಿಂತುಕೊಳ್ಳುವಂಥವು. ರಕ್ತನಾಟಿ, ಮೃದ್ವಸ್ಥಿನಾಟಿ ಕಣ್ಣಿನ ಪಾರದರ್ಶಕ ಭಾಗದ ನಾಟಿ ಇವು ಮಾತ್ರ. ಇನ್ನು ಕೆಲವು ಸ್ವಜಾತೀಯ ನಾಟಿಗಳು ಮತ್ತು ಕೆಲವು ಸಂದರ್ಭಗಳಲ್ಲಿ ಪರಜಾತೀಯ ನಾಟಿಗಳು, ಅವು ಮೃತವಾದ ಮೇಲೂ ಅವುಗಳ ದೃಢತೆ ಹಾಗೂ ಆಕಾರ ವಿಶೇಷಗಳಿಂದ ಉಪಯುಕ್ತವಾಗಿರುತ್ತವೆ. ಮಿಕ್ಕ ನಾಟಿಗಳು ಹೊರವಸ್ತುಗಳಂತೆ ಗಣಿಸಲ್ಪಟ್ಟು ವಿಸರ್ಜಿಸಲ್ಪಡುತ್ತವೆ. ಈ ವಿಸರ್ಜನಸಾಮಥ್ರ್ಯ ದೇಹವನ್ನು ವಿಷಾಣುಗಳಿಂದ ಹೊರ ಪ್ರೋಟೀನ್ ಪದಾರ್ಥಗಳಿಂದ ರಕ್ಷಿಸಿಕೊಳ್ಳುವುದಕ್ಕೋಸ್ಕರ ನಿರೋಧ ವಸ್ತುಗಳು ಉತ್ಪತ್ತಿಯಾಗುವ ಸಾಮಥ್ರ್ಯದಂತೆಯೇ ಇರುತ್ತದೆ ಮತ್ತು ಅದೇ ರೀತಿ ಕಾರ್ಯವೆಸಗುತ್ತದೆ. ದೇಹಕ್ಕೆ ಸಹಜವಾದ ಒಂದು ಗುಣದಿಂದ ತನ್ನೊಳಗೆ ಕೃತಕವಾಗಿ ಅಳವಡಿಸಲಾದ ಅಂಗ ತನ್ನದೋ ಅಥವಾ ಬೇರೊಂದು ದೇಹದ್ದೋ ಎಂಬ ಭೇದ ತಿಳಿಯುತ್ತದೆ. ಹಾಗೆ ತಿಳಿದ ಮೇಲೆ ತಕ್ಕ ಪ್ರತಿಕ್ರಿಯೆಯಿಂದ ಹೊರಗಿನದಾದ ಅಂಗದ ಅಳವಡಿಕೆಯನ್ನು ವಿಸರ್ಜಿಸಬಲ್ಲದು. ದೇಹ ನಿರೋಧ ವಸ್ತುವನ್ನು ಉತ್ಪತ್ತಿ ಮಾಡಿಯೇ ಸಾಮಾನ್ಯವಾಗಿ ಈ  ವಿಸರ್ಜನಕ್ರಿಯೆಯನ್ನು ತೋರಿಸುವುದರಿಂದ, ನಿರೋಧವಸ್ತು ಉತ್ಪತ್ತಿಯಾಗುವುದನ್ನು ತಡೆದುಬಿಟ್ಟರೆ ಸ್ವಜಾತೀಯ ನಾಟಿ ಬಹುಶಃ ಪರಜಾತೀಯ ನಾಟಿಯೂ ನೆಲೆಗೊಳ್ಳಬಹುದೇನೋ ಎನ್ನುವ ಅಂಶ ಅರಿಕೆಯಾಗುತ್ತದೆ. ನಾಟಿ ಮಾಡಲು ಅಂಗವನ್ನು ದಾನಿಯಿಂದ ತೆಗೆದುಕೊಂಡ ಮೇಲೆ, ಅದನ್ನು ಅತಿಶೈತ್ಯದಲ್ಲಿ (4ಡಿಗ್ರಿ ಸೆಂ) ಸಂರಕ್ಷಿಸಿಟ್ಟಿರಬೇಕು. ತೆಗೆದ ಸುಮಾರು 4-6 ಗಂಟೆಗಳೊಳಗೆ ಗ್ರಾಹಕದೇಹದಲ್ಲಿ ನಾಟಿ ಹಾಕಿಬಿಡಬೇಕು. ಸ್ವಾಭಾವಿಕವಾಗಿಯೇ ಅಂಗವನ್ನು ತೆಗೆಯುವಾಗ, ಶೈತ್ಯದಲ್ಲಿ ಸಂಗ್ರಹಿಸಿಟ್ಟಾಗ, ನಾಟಿ ಹಾಕುವಾಗ, ಮತ್ತೆ, ಆ ಮೇಲೆಯೂ ವಿಷಾಣುರಹಿತಸ್ಥಿತಿಯನ್ನು ಬಹು ಎಚ್ಚರಿಕೆಯಿಂದ ಕಾಪಾಡಿಕೊಂಡಿರಬೇಕು. ನಾಟಿ ಹಾಕುವಾಗ ಮೊದಲು ರಕ್ತನಾಳಗಳನ್ನು ಸೇರಿಸಿ ಹೊಲೆದುಬಿಡಬೇಕು. ಇದು 10-20 ಮಿನಿಟುಗಳೊಳಗೆ ಮುಗಿಸಿಬಿಡಬೇಕಾದ ಕಾರ್ಯ. ನಾಟಿ ವಿಸರ್ಜನೆ ಆಗದಂತಿರಬೇಕಾದರೆ ಮತ್ತು ನಾಟಿ ಊರ್ಜಿತವಾಗಬೇಕಾದರೆ ದಾನಿ ಮತ್ತು ಗ್ರಾಹಕ ಇಬ್ಬರ ರಕ್ತಪಂಗಡವೂ ಒಂದೇ ಆಗಿರಬೇಕು. ಇಲ್ಲವಾದರೆ ನಾಟಿ ಹಾಕಿದ ಕೂಡಲೇ ರಕ್ತಕಣಗಳು ಗಂಟು ಕಟ್ಟಿಕೊಂಡು ನಾಟಿಯ ರಕ್ತ ಪೂರೈಕೆಗೆ ಅಡಚಣೆಯುಂಟಾಗಿ ನಾಟಿ ಸತ್ತು ಹೋಗುತ್ತದೆ. ಹೀಗೆ ಕೂಡಲೇ ಆಗದಿದ್ದರೂ ಸ್ವಜಾತೀಯ ನಾಟಿ ಹೊರವಸ್ತುವೇ ಆದ್ದರಿಂದ ಗ್ರಾಹಕ ದೇಹದಲ್ಲಿ ನಿರೋಧ ವಸ್ತುಗಳು ಕ್ಷಿಪ್ರವಾಗಿಯೋ, ನಿಧಾನವಾಗಿಯೋ (ಇದು ಕೆಲವು ತಿಂಗಳುಗಳೇ ಆಗಬಹುದು) ಉತ್ಪತ್ತಿಯಾಗಿ ನಾಟಿ ವಿಸರ್ಜಿಸಲ್ಪಡುತ್ತದೆ. ನಾಟಿ ವಿಸರ್ಜನೆ ಸ್ಥಳೀಯ ಜೀವಾಣುಗಳ ಪ್ರತಿಕ್ರಿಯೆಯಿಂದಲೂ ಅನೇಕ ವೇಳೆ ಉಂಟಾಗುತ್ತದೆ.  ನಾಟಿಗೆ ವಿರೋಧ ವಸ್ತುಗಳು ದೇಹದಲ್ಲಿ ಉತ್ಪತ್ತಿ ಆಗುವ ತನಕ ಅನೇಕ ವೇಳೆ ಅವಕಾಶವೇ ಇರುವುದಿಲ್ಲ. ಆದ್ದರಿಂದ ನಾಟಿ ಊರ್ಜಿತವಾಗಬೇಕಾದರೆ ನಾಟಿ ಮಾಡಿದ ಅಂಗ ಸ್ಥಳೀಕ ಪ್ರತಿಕ್ರಿಯೆಯನ್ನು ಉಂಟುಮಾಡದಂತಿರಬೇಕು. ಇದು ಸ್ವಕೀಯ ನಾಟಿ ಮತ್ತು ಅವಳಿ ನಾಟಿಗಳಲ್ಲಿ ಮಾತ್ರ ಕಾಣಬರುವ ವಿಷಯ. ಹೀಗೆ ನಾಟಿ ಹಾಕಿದ ಮೂತ್ರಪಿಂಡಗಳು 6-8 ವರ್ಷಗಳು ಕ್ರಿಯಾಶೀಲವಾಗಿವೆ; ಮತ್ತು ಇಂಥ ನಾಟಿಯನ್ನಾದರೂ ಅಳವಡಿಸಲು ಬಲವತ್ತರವಾದ ಕಾರಣವನ್ನು ಒದಗಿಸಿವೆ. ಆದರೆ ಇಂಥ ಅವಕಾಶ ಎಷ್ಟು ತಾನೇ ಇದ್ದೀತು? ಸ್ವಜಾತೀಯ ನಾಟಿ ಊರ್ಜಿತವಾಗಬೇಕಾದರೆ ಗ್ರಾಹಕ ವ್ಯಕ್ತಿಯಲ್ಲಿ ನಾಟಿಯನ್ನು ವರ್ಜಿಸುವ ಸ್ಥಳೀಕ ಪ್ರತಿಕ್ರಿಯೆ ಲೋಪವಾಗಿರಬೇಕು. ಇದನ್ನು ಎಕ್ಸ್‍ಕಿರಣ ಪ್ರಯೋಗದಿಂದ ಗ್ರಾಹಕನಲ್ಲಿ ಉಂಟುಮಾಡಿ ನಾಟಿ ಹಾಕಿದ ಮೇಲೆ ಸ್ಥಳೀಯವಾಗಿ ಎಕ್ಸ್‍ಕಿರಣವನ್ನು ಪ್ರಯೋಗಿಸುವುದನ್ನು ಮುಂದುವರಿಸಿ ಸಾಧಿಸಿದ್ದಾರೆ. ನಾಟಿಯ ಊರ್ಜಿತಕ್ಕೆ ನಿರೋಧವಾದ ವಸ್ತುಗಳು ಲಿಂಫೋಸೈಟುಗಳೆಂಬ ಒಂದು ವಿಧವಾದ ಬಿಳಿರಕ್ತ ಕಣಗಳಿಂದ ಉತ್ಪತ್ತಿಯಾಗುವುದರಿಂದ ಲಿಂಫೋಸೈಟುಗಳು ಗ್ರಾಹಕದೇಹದಲ್ಲಿ ಕ್ಷೀಣಿಸುವಂತೆ ಮಾಡುವುದಕ್ಕೋಸ್ಕರವೇ ಎಕ್ಸ್‍ಕಿರಣವನ್ನು ಪ್ರಯೋಗಿಸುವುದು. ಆದರೆ ಇದು ಎಲ್ಲ ಬಿಳಿರಕ್ತಕಣಗಳನ್ನೂ ಕೆಂಪುರಕ್ತಕಣಗಳನ್ನೂ ತಾರತಮ್ಯವಿಲ್ಲದೆ ಕ್ಷಯಗೊಳಿಸಬಹುದು. ಇದಕ್ಕಿಂತಲೂ ಹೆಚ್ಚು ಜೀವಾಣುಮಾರಕಗಳಾದ ಕಾರ್ಟಿಸೋನ್ ಆಸೋಥೈಯಾಪ್ರಿನ್ ಅಥವಾ ಆಕ್ಟಿನೋಮೈಸಿನ್ ಸಿ, ನೈಟ್ರೊಜನ್ ಮಸ್‍ಟರ್ಡ್-ಇವನ್ನು ಉಪಯೋಗಿಸಿ ಸಾಧಿಸಬಹುದು. ಸಹಜವಾಗಿಯೇ ರಕ್ತಕಣಗಳನ್ನೆಲ್ಲ ನಾಶಪಡಿಸುವ ಈ ಮಾರ್ಗ ಸಲ್ಲದ ಮಾರ್ಗ. ಲಿಂಫೋಸೈಟುಗಳನ್ನು ಮಾತ್ರ ನಾಶ ಮಾಡುವ ಲಸಿಕೆಗಳನ್ನು ಈಚೆಗೆ ಕುದುರೆಗಳ ದೇಹದಲ್ಲಿ ತಯಾರುಮಾಡಿ ಪಡೆದಿರುವುದರಿಂದ ಅಂಥ ಲಸಿಕೆಯನ್ನು ಉಪಯೋಗಿಸಿ ಅಳವಡಿಸಿದ ನಾಟಿ ಸಫಲವಾಗುವಂತೆ ಮಾಡಬಹುದು. ಜೊತೆಗೆ ಹೊರವಸ್ತುಗಳಿಗೆ ನಿರೋಧ ವಸ್ತುಗಳು ದೇಹದಲ್ಲಿ ಬೇರೆ ರೀತಿಯಲ್ಲೂ ಉತ್ಪತ್ತಿಯಾಗುವುದನ್ನು ಪ್ರಡ್ನಿಸೋನ್ ಮತ್ತು ಇಮ್ಯಾರಾನ್ ಎಂಬ ಔಷಧಿಗಳು ತಡೆಗಟ್ಟುವ ವಿಧಾನಗಳನ್ನೂ ಲಿಂಫೋಸೈಟ್ ನಿರೋಧಕಗಳು ವರ್ಧಿಸುವುದರಿಂದ ಇವೆರಡು ರೀತಿಯಲ್ಲೂ ಅವುಗಳ ಸಹಾಯದಿಂದ, ನಾಟಿಗೆ ನಿರೋಧವನ್ನು ಹೋಗಲಾಡಿಸಿ ಕೊಳ್ಳಬಹುದು. ಜೊತೆಗೆ ಕಡಿಮೆ ಪ್ರಮಾಣದಲ್ಲಿ ಪ್ರೆಡ್ನಿಸೋನ್ ಮತ್ತು ಇಮ್ಯಾರಾನನ್ನು ಉಪಯೋಗಿಸಬಹುದಾದ್ದರಿಂದ ಅವುಗಳ ನಂಜು ದೇಹಕ್ಕೆ ಕಡಿಮೆ ಮೊತ್ತದಲ್ಲಿ ತಟ್ಟುತ್ತದೆ. ಆದ್ದರಿಂದ ಲಿಂಫೋಸೈಟು ನಿರೋಧಕಗಳು ನಿಜವಾಗಿಯೂ ಸಹಾಯಕವಾಗಿವೆ. ಇದರ ಜೊತೆಗೆ ದಾನಿ ಗ್ರಾಹಕರ ಅಂಗಹೋಲಿಕೆಗಳನ್ನು ಮುಖ್ಯವಾಗಿ ಲಿಂಫೋಸೈಟುಗಳ ಹೋಲಿಕೆಗಳನ್ನೂ ಮಾಡಿ ನಾಟಿ ಮಾಡುವ ಅಂಗ ಗ್ರಾಹಕದೇಹಕ್ಕೆ ಒಗ್ಗುತ್ತದೋ ಇಲ್ಲವೋ ಎನ್ನುವುದನ್ನು ಕಂಡುಕೊಳ್ಳಲಾಗುತ್ತದೆ. ನಾಟಿ ಮಾಡುವುದಕ್ಕೋಸ್ಕರ ನಾಟಿಗೆ ನಿರೋಧವನ್ನು ತಗ್ಗಿಸುವ ಪ್ರಯತ್ನದಲ್ಲಿ ಒಟ್ಟಿನಲ್ಲಿ ಗ್ರಾಹಕ ದೇಹದ ನಿರೋಧ ಶಕ್ತಿಯನ್ನೇ ತಗ್ಗಿಸಲಾಗುತ್ತದೆ. ಇದರಿಂದ ಕ್ಷಣಕ್ಷಣಕ್ಕೂ ವಿಷಾಣುಗಳಿಂದ ದೇಹಕ್ಕೆ ಸೋಂಕು ಉಂಟಾಗುವ ಹೆದರಿಕೆ ಸ್ವಾಭಾವಿಕವಾಗಿಯೇ ಉಂಟಾಗುತ್ತದೆ. ವಿಷಾಣುಗಳನ್ನು ಎದುರಿಸುವುದಕ್ಕೆ ಮಾತ್ರವೇ ಅಲ್ಲದೆ ಬೇರೆ ಇನ್ನಾವ ಕಾರಣಗಳಿಗೂ ನಿರೋಧವಸ್ತುಗಳು ಬೇಕಾಗಿದ್ದಲ್ಲಿ ಅದಕ್ಕೂ ತಡೆಯುಂಟಾಗುತ್ತದೆ ಎನ್ನುವುದನ್ನು ಸಹ ಇಲ್ಲಿ ಗಮನಿಸಬೇಕಾಗಿದೆ.

	ಗುಂಡಿಗೆಯ ನಾಟಿ : ಗುಂಡಿಗೆಯನ್ನು ನಾಟಿ ಹಾಕಲು ಪ್ರಯತ್ನಿಸುವುದಕ್ಕೆ ಮೊದಲು ಗುಂಡಿಗೆಯ ಮೇಲೆ ಯಾವ ಶಸ್ತ್ರಚಿಕಿತ್ಸೆಯನ್ನು ಮಾಡಲೂ ಹೆದರುವ ಕಾಲವಿತ್ತು. ಅದು ಘಾತದಿಂದ ಹರಿದುಹೋಗಿದ್ದುದನ್ನು ಹೊಲಿದು ಪುನವ್ರ್ಯವಸ್ಥೆ ಮಾಡುವುದು, ಅದರ ಮೇಲು ಪೊರೆಯನ್ನು ತೆಗೆದು ಹಾಕುವುದು ಮತ್ತು ಗುಂಡಿಗೆಯ ಕವಾಟಗಳನ್ನು ಅಳವಡಿಸುವ ಪ್ರಯತ್ನ ಇವು ಅತಿ ವಿರಳವಾಗಿ ಜರಗುತ್ತಿದ್ದು ಅನೇಕ ವೇಳೆ ಸಫಲವಾಗುತ್ತಿರಲಿಲ್ಲ. ಸಾಮಾನ್ಯವಾಗಿ ಗುಂಡಿಗೆಯ ಮೇಲಿನ ಶಸ್ತ್ರಕ್ರಿಯೆ ಅಸಾಧ್ಯವೆಂದೇ ಸುಮಾರು 35-40 ವರ್ಷಗಳ ಹಿಂದಿನವರೆಗೂ ನಂಬಲಾಗಿತ್ತು. 1935-40ರ ಕಾಲದಲ್ಲಿ ಎದೆಮೂಳೆಗಳನ್ನು ಕತ್ತರಿಸಿ ತೆಗೆದಿಟ್ಟು ಗುಂಡಿಗೆ ಅಥವಾ ಶ್ವಾಸಕೋಶಗಳಲ್ಲಿ ನೇರವಾದ ಶಸ್ತ್ರಕ್ರಿಯೆಯನ್ನು ಜರಗಿಸಿ ಎದೆಮೂಳೆಗಳನ್ನು ಪುನಃ ಸ್ವಸ್ಥಾನದಲ್ಲಿ ಇಟ್ಟು ಬಂಧಿಸುವ ಏರ್ಪಾಡನ್ನು ಕಂಡುಹಿಡಿದರು. ಇದು ವಿಶೇಷ ರೀತಿಯ ಅರಿವಳಿಕೆ ಮತ್ತು ಕೃತಕ ಶ್ವಾಸಕ್ರಮವನ್ನು ಅವಲಂಬಿಸಿದ್ದರಿಂದ ಸಾಧ್ಯವಾಯಿತು. ಗುಂಡಿಗೆಯನ್ನು ಹೀಗೆ ಬಹಿರಂಗಿಸುವುದು ಸಾಧ್ಯವಾಗಿ ನೇರವಾಗಿ ಅದರ ಪರೀಕ್ಷೆಗೂ ಸಾಧ್ಯವಾದಷ್ಟು ಮಟ್ಟಿಗೆ ಚಿಕಿತ್ಸೆಗೂ ಸುಲಭ ದಾರಿಯಾಯಿತು. ಹಾಗೇ ಗುಂಡಿಗೆಯ ಭಾಗಗಳನ್ನು ಅಳವಡಿಸುವುದೂ ಕೊನೆಗೆ ಗುಂಡಿಗೆಯನ್ನೇ ನಾಟಿ ಹಾಕುವುದೂ ಸಾಧ್ಯವಾಯಿತು. ಅಂದರೆ ಈ ನಾಟಿ ಹಾಕುವ ಯೋಚನೆ ಹುಟ್ಟುವುದಕ್ಕೆ ಮೊದಲು ಗುಂಡಿಗೆಯ ಮೇಲೆ ಅನೇಕ ಶಸ್ತ್ರಕ್ರಿಯೆಗಳು ಆಚರಣೆಗೆ ಬಂದು ಅವುಗಳ ಅನುಭವ ಸಿದ್ಧಿಸಿತ್ತು. ಮುಖ್ಯವಾಗಿ ಈ ಘಟನೆಗಳಲ್ಲಿ ನಾವು ಈ ಕೆಳಗಿನವುಗಳನ್ನು ಪರಿಗಣಿಸಬಹುದಾಗಿದೆ : (I) ಅರಿವಳಿಕೆಯ ಕ್ರಿಯೆ, (ii) ಗುಂಡಿಗೆಯೊಳಗೆ ನಳಿಕೆಯನ್ನು ಹೂಗಿಸುವುದು ಮತ್ತು ರಕ್ತನಾಳಗಳ ಎಕ್ಸ್ ಕಿರಣ ಚಿತ್ರವನ್ನು ತೆಗೆಯುವ ವಿಧಾನ, (iii) ರಕ್ತದ ಒತ್ತಡ ಮುಂತಾದವುಗಳ ನಿಖರವಾದ ಅಳತೆ, (iv) ರಕ್ತದ ವಿಷಯ-ಮುಖ್ಯವಾಗಿ ಅದು ಹೆಪ್ಪುಗಟ್ಟುವ ವಿಚಾರದಲ್ಲಿ-ಪರಿಶೀಲನೆ, (v) ದೇಹದ ಉಷ್ಣತೆಯನ್ನು ತಗ್ಗಿಸಿ ಅರಿವಳಿಕೆಯನ್ನು ತಂದಿಟ್ಟುಕೊಳ್ಳುವಿಕೆ, (vi) ದೇಹಕ್ಕೆ ಹೊರಗಿನಿಂದ ರಕ್ತಚಲನೆಯನ್ನು ಒದಗಿಸುವುದು,  (vii) ಗುಂಡಿಗೆಯ ಮಿಡಿತವನ್ನು ಕೃತಕವಾಗಿ ನಿರ್ವಹಿಸುವಿಕೆ, (viii) ಈಗಿನ ಕಾಲದ ಪ್ಲಾಸ್ಟಿಕ್ ವಸ್ತ್ರಗಳ ಅಳವಡಿಕೆ,  (ix) ಹೊಸತಾಂತ್ರಿಕ ವಸ್ತುಗಳು ಮತ್ತು ವಿಧಾನಗಳನ್ನು ಕಂಡುಹಿಡಿದಿರುವಿಕೆ, (x) ದೇಹದ ನಿರೋಧ ವಿಷಯಕ ಜ್ಞಾನದ ಅಧ್ಯಯನ ಇತ್ಯಾದಿ.

	ಗುಂಡಿಗೆ ನಾಟಿಯಲ್ಲಿ ಒಂದು ಪ್ರಧಾನವಾದ ಕ್ರಮವನ್ನು ಶಂವೇ ಎಂಬಾತ 1960-61ರಲ್ಲಿ ಕ್ಯಾಲಿಫೋರ್ನಿಯಾದ ಸ್ಟಾನ್‍ಫರ್ಡ್ ಆಸ್ಪತ್ರೆಯಲ್ಲಿ ಆಚರಿಸಿ ತೋರಿಸಿದ. ಗ್ರಾಹಕನಲ್ಲಿ ಹೃತ್ಕರ್ಣಗಳನ್ನು ಇಟ್ಟುಕೊಂಡು ಗುಂಡಿಗೆಯ ಮಿಕ್ಕಭಾಗಗಳನ್ನು ತೆಗೆದುಹಾಕಿ, ಈ ಹೃತ್ಕರ್ಣ ಶೇಷಭಾಗಕ್ಕೆ ದಾನಿಯ ಹೃದಯ ಭಾಗವನ್ನು ಸೇರಿಸಿ ಹೊಲಿಯುವುದೇ ಈ ವಿಧಾನ. ಇದೇ ಕಾಲದಲ್ಲಿ ಶ್ವಾಸಕೋಶಗಳನ್ನು ಪಲ್ಲಟಿಸಿದರೆ ಅನುಕೂಲವೇನೋ ಎಂದು ಭಾವಿಸಿ ಪ್ರಾಣಿಗಳ ಮೇಲೆ ಅನೇಕ ವಿಧದ ನಾಟಿ ಪ್ರಯೋಗಗಳನ್ನು ಮಾಡಿ ಅಧ್ಯಯನ ನಡೆಸಿದರು. ಆದರೆ ಅದು ಮಾನವರಲ್ಲಿ ಎಷ್ಟುಮಟ್ಟಿಗೆ ಸಾಧ್ಯ ಎನ್ನುವುದು ಪ್ರಶ್ನೆಯೇ ಆಗಿದೆ. ಇದುವರೆಗೆ ಪಟ್ಟಿರುವ ಪ್ರಯತ್ನಗಳೆಲ್ಲ ಗುಂಡಿಗೆಯನ್ನು ಮಾತ್ರ ನಾಟಿ ಹಾಕಿರುವುದಾಗಿದೆ. 1965ರಲ್ಲಿ ಹಾರ್ಡಿ ಎಂಬ ವೈದ್ಯ ಮಿಸಿಸಿಪಿ ಆಸ್ಪತ್ರೆಯಲ್ಲಿ ಒಬ್ಬ ಹುಡುಗನಿಗೆ ಚಿಂಪಾಜಿಯ ಗುಂಡಿಗೆಯನ್ನು ನಾಟಿ ಹಾಕಿಸಿದ. ಅದು ಸ್ವಾಭಾವಿಕವಾಗಿಯೇ ಒಂದು-ಒಂದೂವರೆ ಗಂಟೆಯೊಳಗೆ ನಿಂತುಹೋಯಿತು. ಪರಜಾತಿಯ ನಾಟಿಯಾಗಿ ಅದು ಅಷ್ಟು ಹೊತ್ತಾದರೂ ಕೆಲಸ ಮಾಡಿದ್ದೇ ಆಶ್ಚರ್ಯ. ಸ್ವಜಾತೀಯ ನಾಟಿಯಾಗಿ ಗುಂಡಿಗೆಯನ್ನು  ಮೊದಲು 1967ರಲ್ಲಿ ಬ್ರೂಕ್ಲೀನ್ ಆಸ್ಪತ್ರೆಯಲ್ಲಿ ಕಾಂಟ್ರೋವಿಟ್ಸ್ ಎಂಬಾತ 19 ದಿವಸಗಳ ಶಿಶುವಿನಲ್ಲಿ ಜರಗಿಸಿದ.  ಈ ಶಿಶುವಿಗೆ ತ್ರಿದಳ ಕವಾಟ ಹುಟ್ಟಿದಾಗಿನಿಂದ ಕುಗ್ಗಿಹೋಗಿಬಿಟ್ಟಿದ್ದರಿಂದ ಹೀಗೆ ಏನಾದರೂ ಪುನರ್‍ವ್ಯವಸ್ಥೆ ಮಾಡದೇ ಇದ್ದರೆ ಅದು ಬದುಕುವ ಆಸೆಯೇ ಇರಲಿಲ್ಲ. ಆಗ ತಾನೆ ಮೃತಿ ಹೊಂದಿದ ಇನ್ನೊಂದು ಶಿಶುವಿನ ಗುಂಡಿಗೆಯನ್ನು ತೆಗೆದು ಈ ಶಿಶುವಿನ ಹೃದಯಕ್ಕೆ ಬದಲಾಗಿ ಸುಮಾರು ಎರಡೂವರೆ ಗಂಟೆಗಳ ಕಾಲ  ಶಸ್ತ್ರಕ್ರಿಯೆಯಿಂದ ಅಳವಡಿಸಲಾಯಿತು. ಹೀಗೆ ಅಳವಡಿಸಿದ ಗುಂಡಿಗೆ ಸುಮಾರು 6 ಗಂಟೆಗಳ ಕಾಲ ಕ್ರಿಯೆ ಜರಗಿಸಿ ಆಮೇಲೆ ನಿಂತುಹೋಯಿತು. ಬಹುಶಃ ಎರಡು ಶಿಶುಗಳ ರಕ್ತಗಳು ಹೊಂದಾಣಿಕೆ ಆಗದ್ದರಿಂದ ಹೀಗಾಯಿತು ಎಂದು ಕಾಣಿಸುತ್ತದೆ. ಏಕೆಂದರೆ ವಿಶೇಷ ಕ್ರಿಯೆಯಿಂದ ನಾಟಿ ವಿಸರ್ಜಿತವಾಗಿ ನಿರುಪಯುಕ್ತವಾಗಬೇಕಾದರೆ ಕೆಲವೇ ಗಂಟೆಗಳ ಅವಕಾಶ ಸಾಲದು. 
1967ರ ಡಿಸೆಂಬರ್ 3ನೆಯ ತಾರೀಖು ದಕ್ಷಿಣ ಆಫ್ರಿಕಾದ ಕೇಪ್‍ಟೌನಿನಲ್ಲಿ ಹೃದಯ ವೈದ್ಯನಾದ ಕ್ರಿಶ್ಚನ್ ಬರ್ನಾರ್ಡ್ ಮತ್ತು ಅವನ ತಂಡದವರು 55 ವರ್ಷ ವಯಸ್ಸಿನ ವಾಷ್ಕಂಸ್ಕಿ ಎಂಬುವನಿಗೆ ಆಗತಾನೆ ವಾಹನಾಪಘಾತದಿಂದ ಮೃತಿಹೊಂದಿದ್ದ 25 ವರ್ಷ ವಯಸ್ಸಿನ ಮಹಿಳೆಯೋರ್ವಳ ಹೃದಯವನ್ನು ಮೊತ್ತಮೊದಲು ಅಳವಡಿಸಿದರು. ಡಿಸೆಂಬರ್ 21ರ ತನಕ ವಾಷ್ಕಂಸ್ಕಿ ಬದುಕಿದ್ದು, ಅಂದು ನ್ಯೂಮೋನಿಯಾದಿಂದ ಮೃತಪಟ್ಟ. ನಾಟಿ ವಿಸರ್ಜನೆಯ ಕ್ರಮದಲ್ಲಿ ನ್ಯೂಮೋನಿಯಾ ಬರಬಹುದಾದರೂ ವಾಷ್ಕಂಸ್ಕಿಯ ವಿಷಯದಲ್ಲಿ ಹೀಗಾಯಿತೆಂದು ಹೇಳುವ ಹಾಗಿಲ್ಲ. ಬರ್ನಾರ್ಡ್‍ನ ಅಭಿಪ್ರಾಯದಂತೆ ಸಾವು ನಾಟಿ ವಿಸರ್ಜನೆಯಿಂದ ಉಂಟಾಯಿತು ಎಂದು ಹೇಳುವಂತಿರಲಿಲ್ಲ. ವಾಷ್ಕಂಸ್ಕಿಯಲ್ಲಿ ಗುಂಡಿಗೆ ನಾಟಿ ಹಾಕಿದ ತರುಣದಲ್ಲೇ ಇಂಥ ಇನ್ನೊಂದು ಸಂದರ್ಭ ಒದಗಿ ಬ್ಲೈಬರ್ಗ್ ಎಂಬ ದಂತವೈದ್ಯನಿಗೆ ನೀಗ್ರೋ ತರುಣಿಯ ಗುಂಡಿಗೆಯನ್ನು ನಾಟಿ ಹಾಕಲಾಯಿತು. ಇದನ್ನು ಸಹ ಕ್ರಿಶ್ಚನ್ ಬರ್ನಾರ್ಡ್‍ನೆ ಸಾಧಿಸಿದ್ದು. ಬ್ಲೈಬರ್ಗ್‍ನು ಅನೇಕ  ತಿಂಗಳುಗಳ ಕಾಲ ನಾಟಿ ಗುಂಡಿಗೆಯ ಬಲದಿಂದಲೇ ಜೀವಂತನಾಗಿದ್ದು,  ಕೊನೆಗೆ ಸತ್ತುಹೋದ. ಇದು ನಾಟಿ ಹಾಕುವ ಕ್ರಮದ ಜಯವೋ, ಸೋಲೋ ಎಂಬ ನಿರ್ಧಾರದ ಮಾತನ್ನು ಸದ್ಯದಲ್ಲಿ ತಡೆಯಲ್ಲಿಟ್ಟಿರುವ ಹಾಗೆ ಕಾಣಿಸುತ್ತದೆ. ಗುಂಡಿಗೆಯ ನಾಟಿಯಲ್ಲಾಗಲೀ ಇನ್ನಾವ ನಾಟಿಯಲ್ಲಾಗಲೀ ವಿಷಯವನ್ನು ಇನ್ನೂ ಹೆಚ್ಚಿಗೆ ಅರಿಯುವತನಕ ಮುಂದುವರಿಯಬಾರದು ಎನ್ನುವ ಅಭಿಪ್ರಾಯ ಮೂಡಿರುವಂತೆ ಕಾಣುತ್ತದೆ. ಮೂತ್ರಪಿಂಡದ ನಾಟಿಯ ವಿಷಯದಲ್ಲಿ ಇಷ್ಟು ಹಿಂದುಮುಂದು ನೋಡಬೇಕಾಗಿಲ್ಲ. ಇದಕ್ಕೆ ಅನೇಕ ಕಾರಣಗಳಿವೆ. ಮನುಷ್ಯದೇಹದಲ್ಲಿ ಎರಡು ಮೂತ್ರಪಿಂಡಗಳಿವೆ. ಸಾಮಾನ್ಯ ಮೂತ್ರೋತ್ಪತ್ತಿ, ವಿಸರ್ಜನೆಗಳಿಗೆ ಒಂದೇ ಮೂತ್ರಪಿಂಡದ 1/3, 1/4  ಭಾಗವಿದ್ದರೂ ಸಾಕಾಗುತ್ತದೆ. ಆದ್ದರಿಂದ ಇನ್ನೊಂದು ಮೂತ್ರಪಿಂಡವನ್ನು ಬದುಕಿರುವ ದಾನಿಯಿಂದಲೇ ತೆಗೆದುಕೊಳ್ಳಬಹುದು. ದಾನಿ ಯಾರಾಗಿರಬೇಕು, ಗ್ರಾಹಕನಿಗೆ ಇರಬೇಕಾದ ವೈಷಿಷ್ಟ್ಯಗಳೇನು ಎಂಬ ಪ್ರಶ್ನೆಗಳು ಗುಂಡಿಗೆಯ ವಿಷಯದಲ್ಲಿ ಇರಬೇಕಾದಷ್ಟು ಸಂದಿಗ್ಧವಾಗಿ ಇಲ್ಲಿ ಇರಬೇಕಾಗಿಲ್ಲ. ಜೊತೆಗೆ ಅನೇಕ ವೇಳೆ ದಾನಿಯು, ಗ್ರಾಹಕನೂ ಅವಳಿಜವಳಿಯಾಗಿರುವುದರಿಂದ ಇದು ಒಂದು ವಿಶೇಷವಾದ ಸ್ವಕೀಯ ನಾಟಿಯೆಂದೇ ಪರಿಗಣಿಸಬೇಕಾಗಿದೆ. ಬೇರೆ ಸ್ವಜಾತಿ ಮೂತ್ರಪಿಂಡದ ನಾಟಿಯಲ್ಲಿ ಸಹ, ರಕ್ತ ಪಂಗಡದ ಒಗ್ಗುವಿಕೆ, ವಿಸರ್ಜನಾ ಸಾಮಥ್ರ್ಯವನ್ನು ಅಡಗಿಸುವಿಕೆ ಮುಂತಾದ ಎಚ್ಚರಗಳನ್ನು ತೆಗೆದುಕೊಳ್ಳುವುದರಿಂದ ಅವು ಫಲಿತವಾಗುವುದು ಹೆಚ್ಚೇನೂ ಅಲ್ಲ.
ಮೂತ್ರಪಿಂಡ, ಗುಂಡಿಗೆಗಳಂತೆಯೇ ಬೇರೆ ಅಂಗಗಳನ್ನು ನಾಟಿ ಹಾಕಿದ್ದಾರೆ. ಯಕೃತ್ತು, ಶ್ವಾಸಕೋಶಗಳ ನಾಟಿಗಳು ಫಲಿಸಿವೆ. ಯಕೃತ್ತಿನ ನಾಟಿ ಪ್ರಾಣಿಗಳಲ್ಲಿ ಸಾಧ್ಯವಾಗಿದ್ದರೂ ಬಹುಕಾಲದಿಂದ ಮನುಷ್ಯರಲ್ಲಿ ಅಸಾಧ್ಯವಾಗಿತ್ತು. ಈಚೆಗೆ ಕಾಲೋರಾಡೋವಿನಲ್ಲಿ ಸೇಗಲ್ ಎಂಬಾತ ಕೆಲವು ಯುವತಿಯರಲ್ಲಿ ಯಕೃತ್ತನ್ನು ನಾಟಿಹಾಕಿ ಅವರನ್ನು ಜೀವಂತವಾಗಿಟ್ಟಿದ್ದಾನೆ. ಅದೇರೀತಿ ಶ್ವಾಸಕೋಶದ ನಾಟಿಯೂ ಸಿದ್ಧಿಸಿದೆ. ಆದರೆ ಕೃತಕವಾಗಿ ಅಳವಡಿಸಿ ನಾಟಿಯಾದ ಶ್ವಾಸಕೋಶ ಒಂದು ವರ್ಷದೊಳಗೆ ನಿರುಪಯುಕ್ತವಾಗಿರುವುದು ಕಂಡುಬಂದಿದೆ. ಒಟ್ಟಿನಲ್ಲಿ ಯಾವ ಅಂಗವಾದರೂ ಸುಮಾರು ಅರ್ಧಗಂಟೆ ರಕ್ತ ಪೂರೈಕೆಯೆ ಇಲ್ಲದಿರುವುದನ್ನು ತಡೆದುಕೊಳ್ಳಬಲ್ಲದ್ದೇ. ಆದರೆ ಅಂತ ಅಂಗವನ್ನು ಇಂದಲ್ಲದಿದ್ದರೆ ನಾಳೆ ನಾಟಿ ವಿಧಾನದಿಂದ ಅಳವಡಿಸಬಹುದು ಎಂದು ತೋರುತ್ತದೆ. ಜನರಲ್ಲಿ ಬೇಕಾದಾಗ ರಕ್ತವನ್ನು ನಳಿಕೆಯ ಮೂಲಕ ದೇಹಕ್ಕೆ ಹೊಗಿಸುವ ಬದಲು ಸ್ವಜಾತೀಯ ರಕ್ತಜನಕ ಮಜ್ಜೆಯನ್ನು ನಾಟಿಹಾಕುವುದು ಬಹಳ ವರ್ಷಗಳಿಂದ ನಡೆಯುತ್ತಿರುವ ಪ್ರಯತ್ನ. ನಾಟಿ ವಿಸರ್ಜನ ವಿಧಾನದಿಂದ ಗ್ರಾಹಕ ದೇಹದಲ್ಲಿ ಸಾಧಾರಣವಾಗಿ ಇವು ಸಫಲವಾಗುತ್ತಿರಲಿಲ್ಲ. ಈಚೆಗೆ ಲಿಂಫೋಸೈಟು ನಿರೋಧ ಲಸಿಕೆಯಿಂದ ಉತ್ತೇಜಿತರಾಗಿ  ಸ್ವಜಾತೀಯ ಮಜ್ಜೆ ನಾಟಿ ಹಾಕುವುದನ್ನು ಪುನರಾರಂಭಿಸಿದ್ದಾರೆ. 

ಕೃತಕ ಗುಂಡಿಗೆಯ ವಿಷಯವಾಗಿ ಡಿ ಬೇಕಿ ಎಂಬ ಲೋಕಪ್ರಸಿದ್ಧ ವೈದ್ಯ ಹೀಗೆ ಹೇಳಿದ್ದಾನೆ: ಗುಂಡಿಗೆಯ ನಾಟಿ ಸರಿಯಾದ ಮಾರ್ಗವಲ್ಲ ; ಹದಗೆಟ್ಟ ಗುಂಡಿಗೆಗೆ ಪೂರ್ಣ ಕೃತಕ ಗುಂಡಿಗೆಯ ಅಳವಡಿಕೆಯೆ ತಕ್ಕ ಮಾರ್ಗ. ಮಿಕ್ಕ ನಾಟಿಗಳಿಗೂ ಈ ಮಾತನ್ನು ಅನ್ವಯಿಸಬಹುದು.  (ಎಸ್.ಆರ್.ಆರ್)

ಭಾರತದಲ್ಲಿ ಕೃತಕ ಅಂಗಗಳ ಅಳವಡಿಕೆ :  ಪುಣೆಯಲ್ಲಿರುವ ಕೃತಕ ಅಂಗಗಳ ಕೇಂದ್ರವನ್ನು (ಆರ್ಟಿಫಿಶಿಯಲ್ ಲಿಂಬ್ ಸೆಂಟರ್) 1944ರಲ್ಲಿ ಸ್ಥಾಪಿಸಲಾಯಿತು. ಪ್ರೋಸ್ಥೆಟಿಕ್ಸ್ (ನ್ಯೂನತಾಪೂರಣಶಾಸ್ತ್ರ) ಮತ್ತು ಆರ್ಥೋಟಿಕ್ಸ್ (ತಿರುಚಿಹೋದ ಅಂಗವನ್ನು ನೇರಗೊಳಿಸುವ ಚಿಕಿತ್ಸೆ) ವಿಭಾಗಗಳಲ್ಲಿ ಏಷ್ಯದಲ್ಲಿ ಮುಂದುವರಿದ ಕೇಂದ್ರಗಳಲ್ಲಿ ಇದು ಸಹ ಒಂದು. ಈ ಕೇಂದ್ರದ ಆಡಳಿತ ಭಾರತ ಸೈನ್ಯ ವಿಭಾಗಕ್ಕೆ ಸೇರಿದೆ. 1964ರಲ್ಲಿ ಎರಡು ಉಪಕೇಂದ್ರಗಳನ್ನು ದೆಹಲಿಯಲ್ಲೂ ಲಖನೌದಲ್ಲೂ ಆಯಾ ಸ್ಥಳಗಳ ಸೈನ್ಯಾಸ್ಪತ್ರೆಗಳಿಗೆ ಹಾಗೂ ತಾಂತ್ರಿಕ ನೆರವು ತ್ರಿವೇಂದ್ರಂ, ಅಹಮದಾಬಾದ್, ಪಾಟ್ನ, ಹೈದರಾಬಾದ್, ಚೆನ್ನೈ, ಪಾಟಿಯಾಲ ಮತ್ತು ಕೊಲ್ಕತ್ತ ನಗರಗಳ ಸರ್ಕಾರೀ ಮುಖ್ಯ ಆಸ್ಪತ್ರೆಗಳಲ್ಲಿ ದೊರೆಯುವ ಏರ್ಪಾಡನ್ನು ಮಾಡಲಾಗಿದೆ. ಯುದ್ಧ ಪ್ರಹಾರದಿಂದ ಪುಣೆ ಕೇಂದ್ರ (ಮತ್ತು ಅದರ ಉಪಕೇಂದ್ರಗಳು) ಈಗ ಸೈನಿಕೇತರ ನಾಗರಿಕರನ್ನು ಸಹ ಸ್ವೀಕರಿಸಿ ಯುಕ್ತ ಚಿಕಿತ್ಸೆ ಮತ್ತು ಶುಶ್ರೂಷೆ ನೀಡುತ್ತದೆ. ಅಂಗವಿಕಲರಾಗಲಿ ಅಂಗವಿಹೀನರಾಗಲಿ ತಮ್ಮ ದೈಹಿಕ ಕೊರತೆಯೊಡನೆ ಮಾನಸಿಕವಾಗಿಯೂ ಕೊರೆ ಉಳ್ಳವರಾಗಿರುತ್ತಾರೆ. ಸಮಾಜದ ಮುಖ್ಯ ಪ್ರವಾಹದಲ್ಲಿ ತಮಗೆ ಸಕ್ರಿಯವಾಗಿ ಭಾಗವಹಿಸಲು ಆಗದಿರುವುದು ಒಂದು ಕಾರಣವಾದರೆ ಜೀವನ ನಿರ್ವಹಣೆ ಸಮಸ್ಯೆ ಇನ್ನೊಂದು ಕಾರಣ. ಇಂಥವರಿಗೆ ಚಿಕಿತ್ಸೆ ನೀಡುವಾಗ ಎರಡು ಪ್ರಧಾನ ಅಂಶಗಳನ್ನು ಪುಣೆ ಕೇಂದ್ರದಲ್ಲಿ ಗಮನಿಸುತ್ತಾರೆ. ಒಂದು, ಮಾನಸಿಕವಾಗಿ ಅಂಗವಿಕಲರನ್ನು ಸಹಜವ್ಯಕ್ತಿಗಳ ಮಟ್ಟಕ್ಕೆ ಬರುವಂತೆ ಸಿದ್ಧಪಡಿಸುವುದು: ಎರಡು, ಶಸ್ತ್ರಕ್ರಿಯೆ ಹಾಗೂ ಯೋಗ್ಯಮಟ್ಟಕ್ಕೆ ಬರುವಂತೆ ಏರ್ಪಡಿಸುವುದು. ಈ ಕ್ರಿಯೆ ತೀರಾ ವೈಯಕ್ತಕವಾದದ್ದು. ಇದನ್ನು ಯಶಸ್ವಿಯಾಗಿ ನಿರ್ವಹಿಸಲು ಪುಣೆ ಕೇಂದ್ರ ಹಾಗೂ ಅದರ ಉಪಕೇಂದ್ರಗಳಲ್ಲಿ ಸೌಕರ್ಯಗಳಿವೆ. ಅಂಗವಿಕಲರಿಗೆ ಪುಣೆ ಕೇಂದ್ರದಲ್ಲಿ ಒದಗಿಸುವ ಕೃತಕ ಅಂಗಗಳ ಯಾದಿ ಇಲ್ಲಿ ಬರೆದಿದೆ: (1) ಕೆಳಕಾಲಿನ ಶಸ್ತ್ರನಿರ್ಮೂಲನವಾದಾಗ ಉಪಯೋಗಿಸಲು ನಿಜ ಆಕಾರವಿರುವ ಕಾಲುಗಳು ಮತ್ತು ಗೂಟ ಕಾಲುಗಳು. (2) ಕೆಲಸಮಾಡುವ ಕೈಗಳು ಮತ್ತು ಉಡುಪುಧಾರಣೆಗೋಸ್ಕರ ಕೈಗಳು.(3)ಗಿಡ್ಡ ಕಾಲಿರುವಾಗ ಅಥವಾ ಪಾದನ್ಯೂನತೆ ಇರುವಾಗ ಉಪಯೋಗಿಸಲು ಸರ್ಜಿಕಲ್ ಪಾದರಕ್ಷೆಗಳು.(4) ಪಾಶ್ರ್ವವಾಯು ಮುಂತಾದವುಗಳಿಂದ ಕಾಲಿನ ಸ್ವಾಧೀನ ಕಳೆದುಕೊಂಡವರ ಅಥವಾ ಕಾಲು ವಿಕಾರವಾದವರ ಉಪಯೋಗಾರ್ಥ ಕ್ಯಾಲಿಪರುಗಳು. (5)ಹರ್ನಿಯಾ ಟ್ರಸ್ಸುಗಳು (6) ಕೆಳಹೊಟ್ಟೆಯ ಬೆಲ್ಟುಗಳು, (7) ಬೆನ್ನು ಮೂಳೆಯ ಬ್ರೇಸುಗಳು ಮತ್ತು ಜ್ಯಾಕೆಟ್ಟುಗಳು. (8) ಸರ್ವಿಕಲ್ ಕಾಲರುಗಳು.(9) ಬೇರೆ ಬೇರೆ ರೂಪದ ಪಟ್ಟಿಗಳು. (10) ಮಂಡಿಯಿಂದ ಮೇಲೆ ಶಸ್ತ್ರ ನಿರ್ಮೂಲನವಾದಾಗ ಉಪಯೋಗಿಸಲು ಕಿರುಗೂಟಗಳು.(11) ಒರಗು ಪ್ಯಾಡುಗಳು (12) ಮೂಳೆಗೆ ಸಂಬಂಧಿಸಿದ ಇತರ ಆಧಾರಗಳು. (13) ನಡೆಯಲಾಗದವರ ಚಲನೆಗೋಸ್ಕರ ಚರಕುರ್ಚಿಗಳು. (14) ಕಂಕುಳು ಅಥವಾ ಊರುಗೋಲುಗಳು (15) ಕೈಕೋಲುಗಳು ಇತ್ಯಾದಿ.
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ